ಸಿನಿಮಾ ಸುದ್ದಿ

ಕನ್ನಡ ಸೇರಿ ಬಹುಭಾಷಾ ಸಿನಿಮಾ ಸ್ಟಂಟ್ ಮಾಸ್ಟರ್ ಜಾಲಿ ಬಾಸ್ಟಿಯನ್ ಹೃದಯಾಘಾತದಿಂದ ನಿಧನ

Sumana Upadhyaya

ಬೆಂಗಳೂರು: ಹೃದಯಾಘಾತದಿಂದ ಸ್ಯಾಂಡಲ್ ವುಡ್ ನ ಮತ್ತೊಬ್ಬ ಕಲಾವಿದ ನಿಧನರಾಗಿದ್ದಾರೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿಯನ್ ಹಠಾತ್ ಹೃದಯಘಾತದಿಂದ ನಿನ್ನೆ ಮಂಗಳವಾರ ರಾತ್ರಿ ನಿಧನ ಹೊಂದಿದ್ದು, ಅವರಿಗೆ 57 ವರ್ಷ ವಯಸ್ಸಾಗಿತ್ತು. 

ವಿ.ರವಿಚಂದ್ರನ್ ಅವರ ಖ್ಯಾತ ಚಿತ್ರ ಪ್ರೇಮಲೋಕ’ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮಾಸ್ಟರ್​ ಪೀಸ್’ ಸೇರಿ ನೂರಾರು ಸಿನಿಮಾಗಳಿಗೆ ಅವರು ಸ್ಟಂಟ್​ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಜಾಲಿ ಅವರು 1966ರಲ್ಲಿ ಕೇರಳದ ಅಲೆಪ್ಪೆಯಲ್ಲಿ ಜನಿಸಿದ್ದರು. ನಂತರ ಓದು, ಬೆಳೆದಿದ್ದೆಲ್ಲವು ಬೆಂಗಳೂರಿನಲ್ಲಿ. ಬೈಕ್ ಮೆಕಾನಿಕ್ ಆಗಿ ಜಾಲಿ ಬಾಸ್ಟಿನ್ ವೃತ್ತಿ ಆರಂಭಿಸಿದರು. ಅವರನ್ನು ಗುರುತಿಸಿದ ಕೆಲವರು ಸ್ಟಂಟ್​ಮನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದರು. 17ನೇ ವಯಸ್ಸಿನಲ್ಲಿ ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದ್ದರು. 

ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನಾದರು. ಒಂದು ಕಾಲಕ್ಕೆ ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಜಾಲಿ ಬಾಸ್ಟಿನ್ ಹೆಸರು ಮಾಡಿದ್ದರು.

‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿ’ ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಲ್ಲಿ ಜಾಲಿ ಕೆಲಸ ಮಾಡಿದ್ದಾರೆ. 

SCROLL FOR NEXT