ಸಿನಿಮಾ ಸುದ್ದಿ

ದೇವರು-ದೇವರೇ... ಕಲಾವಿದರು-ಕಲಾವಿದರೇ: 'ಪುನೀತ ಮಾಲೆ' ಹಾಕುವವರ ವಿರುದ್ಧ ನಟ ಪ್ರಥಮ್ ಕಿಡಿ!

Shilpa D

ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅಪ್ಪು ಹುಡುಗರು ಡಾ.ಪುನೀತ್ ರಾಜ್ ಕುಮಾರ್  ಅಭಿಮಾನಿ ಬಳಗದ ವತಿಯಿಂದ ‘ಅಪ್ಪು ದೇವರ ಮಾಲೆ ವ್ರತ’ ಆಚರಣೆಯನ್ನು ಮಾಡಲಾಗುತ್ತಿದೆ. ಈ ಕುರಿತು ಬಿಗ್ ಬಾಸ್ ವಿನ್ನರ್ ಪ್ರಥಮ್ ಕಿಡಿಕಾರಿದ್ದಾರೆ. ಕಲಾವಿದರನ್ನು ದೇವರು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಕೆಲವರು ಪುನೀತ್ ರಾಜ್‌ಕುಮಾರ್ ಅವರನ್ನು ನಟರನ್ನಾಗಿ ಮಾತ್ರ ನೋಡಿ ದೇವರೆಂದೂ ಮನುಷ್ಯನಾಗಲಾರ ಎಂದು ಎಷ್ಟೇ ಕಾಮೆಂಟ್ ಹಾಕಿದ್ದೂ ಸಹ ಉಂಟು. ಈ ಸಾಲಿಗೆ ಇದೀಗ ನಟ ಒಳ್ಳೆ ಹುಡ್ಗ ಪ್ರಥಮ್ ಸಹ ಸೇರಿಕೊಂಡಿದ್ದಾರೆ. ಕಲಾವಿದರು ಕಲಾವಿದರೇ, ದೇವರು ದೇವರೇ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇಷ್ಟು ದಿನಗಳ ಕಾಲ ಅಪ್ಪು ಬಾಸ್ ಎನ್ನುತ್ತಿದ್ದ ಪ್ರಥಮ್ ಈಗ ಈ ರೀತಿ ವಿರೋಧ ವ್ಯಕ್ತಪಡಿಸಲು ಕಾರಣವೂ ಸಹ ಇದೆ.

ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಯ್ಯಪ್ಪ ಸ್ವಾಮಿ ಮಾದರಿಯಲ್ಲಿಯೇ ಮಾರ್ಚ್ 1ರಿಂದ 17ರವರೆಗೆ ಪುನೀತ ಮಾಲೆ ಧರಿಸಿ ಪುನೀತ್ ರಾಜ್‌ಕುಮಾರ್ ಫೋಟೊ ಇಟ್ಟು ಪೂಜೆ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ ರಾಜ್ಯದಲ್ಲಿನ ಅಪ್ಪು ಅಭಿಮಾನಿಗಳು ಈ ರೀತಿ ಮಾಲೆ ಹಾಕಿಕೊಳ್ಳಬಹುದು ಎಂದು ಹಲವು ನಿಯಮಗಳನ್ನೂ ಸಹ ಪ್ರಕಟಿಸಿದ್ದರು.

ಈ ಪ್ರಕಟಣೆ ವೈರಲ್ ಆದ ಬೆನ್ನಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಟರಿಗೆ ಗೌರವ ನೀಡಿ ತಪ್ಪಿಲ್ಲ, ಆದರೆ ಈ ರೀತಿಯ ಅತಿರೇಕದ ಅಚರಣೆ ಬೇಡ ಎಂದಿದ್ರು. ಇದೀಗ ಪ್ರಥಮ್ ಸಹ ಇದೇ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ದೇವರ ಮೇಲೆ ಭಕ್ತಿ ಇರಲಿ! ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ...! ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ...! ಬಹಳ ಶಿಸ್ತುಗಳನ್ನ ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು...! ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು!! ದೇವರು-ದೇವರೇ...ಕಲಾವಿದರು-ಕಲಾವಿದರೇ!" ಎಂದು ಟ್ವೀಟ್ ಮಾಡಿರುವ ಪ್ರಥಮ್ ಪುನೀತ ಮಾಲೆ ಧರಿಸುವ ಯೋಜನೆ ಹಾಕಿದವರ ವಿರುದ್ಧ ಕಿಡಿಕಾರಿದ್ದಾರೆ.

ಪ್ರಥಮ್ ಮಾತಿಗೆ ಕೆಲವರು ಬೆಂಬಲ ಸೂಚಿಸಿದ್ದೂ, ಇನ್ನೂ ಕೆಲವರು ವಿರೋಧಿಸಿದ್ದಾರೆ. ನಮ್ಮ ಪಾಲಿಗೆ ಪುನೀತ್ ಅವರೇ ದೇವರು. ಹಾಗಾಗಿ ನಾವು ವ್ರತ ಮಾಡುತ್ತೇವೆ. ಕೇಳುವುದಕ್ಕೆ ನೀನ್ಯಾರು? ಅಂದವರೂ ಇದ್ದಾರೆ. ವ್ರತ ಆಚರಿಸಿದರೆ ಇದರಲ್ಲಿ ಧಾರ್ಮಿಕ ನಂಬಿಕೆಯ ಅತಿರೇಕ ಹೇಗೆ ಆಗುತ್ತದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

SCROLL FOR NEXT