ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಪ್ರಿಮಿಯರ್ ಶೋ ಮಾಡಿ ಸೆಲಬ್ರೆಟಿಗಳಿಗೆ ಹಾಗೂ ಮಿಡಿಯಾದವರಿಗೆ ಮುಂಚಿತವಾಗಿ ಸಿನಿಮಾ ತೋರಿಸುವುದು ಸಾಮಾನ್ಯ. ಆದರೆ, ಇಲ್ಲೊಂದು ಸಿನಿಮಾ ತಂಡ ಬಿಡುಗಡೆಗೂ ಮುನ್ನ ಕಾಲೇಜುಗಳಲ್ಲಿ ಸುಮಾರು 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸುವ ಮೂಲಕ ವಿಭಿನ್ನ ರೀತಿಯ ಪ್ರಚಾರವನ್ನು ಆರಂಭಿಸಿದೆ.
'ನಮಸ್ತೆ ಗೋಷ್ಟ್' ಸಿನಿಮಾವನ್ನು ಭರತ್ ನಂದ ನಟಿಸಿ, ನಿರ್ದೇಶನ ಮಾಡಿದ್ದು, ಕಳೆದ ವರ್ಷ ಸದ್ದು ಮಾಡಿದ್ದ 'ಈ ಸಿನಿಮಾ ಜುಲೈ.14ರಂದು ತೆರೆಗೆ ಬರಲು ಸಿದ್ಧವಾಗಿದೆ.
ಚಿತ್ರತಂದ ಹೊಸ ಪ್ರಯೋಗ ಕುರಿತು ಮಾತನಾಡಿದ ನಿರ್ದೇಶಕ, ನಟ ಭರತ್ ಅವರು, ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವುದು ಸಾಮಾನ್ಯದ ಮಾತಲ್ಲ. ಜನರು ಓಟಿಟಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆ. ಅಷ್ಟು ಸುಲಭವಾಗಿ ಪ್ರೇಕ್ಷಕರು ಥಿಯೇಟರ್‌ನತ್ತ ಸುಳಿಯುವುದಿಲ್ಲ. ಪ್ರತೀ ವರ್ಷ 200-300 ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ, ಮುಷ್ಠಿಯಷ್ಟು ಸಿನಿಮಾಗಳಿಗೆ ಮಾತ್ರ ಗುರ್ತಿಕೆಗಳು ಸಿಗುತ್ತವೆ. ಹೀಗಿರುವಾಗ ಏನಾದರೊಂದು ಹೊಸ ಪ್ಲ್ಯಾನ್ ಬೇಕಾಗಿತ್ತು. ಅದಕ್ಕಾಗಿ ಈ ಯೋಜನೆ ಹಾಕಿಕೊಂಡೆವು.
ಸಿನಿಮಾಗಳು ಹೆಚ್ಚು ಪ್ರಚಾರ ಪಡೆಯುವುದೇ ಜನರ ಮಾತುಗಳಿಂದ. ಸಿನಿಮಾ ನೋಡಿದವರು, ಅದನ್ನು ಇನ್ನೊಬ್ಬರಿಗೆ ಹೇಳಿದಾಗ ಅದು ಹೆಚ್ಚು ಪ್ರಚಾರವಾಗುತ್ತದೆ. ಹಾಗಾಗಿಯೇ ಈ ರೀತಿ ಮೌತ್ ಪಬ್ಲಿಸಿಟಿ ಸಿಗಲಿ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸಿದೆವು. ಸಿನಿಮಾ ತೋರಿಸಲು 30 ಕಾಲೇಜುಗಳನ್ನು ಸಂಪರ್ಕಿಸಲಾಯಿತು. ಕಾಲೇಜುಗಳ ಆಡಿಟೋರಿಯಂ ಮೂಲಕ 6000 ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸಲಾಯಿತು. ಸಿನಿಮಾ ನೋಡಿದ ವಿದ್ಯಾರ್ಥಿಗಳು ಪಾಸಿಟಿವ್ ರಿಯಾಕ್ಷನ್ ನೀಡಿದ್ದಾರೆ. ಇದರಿಂದ ಹೆಚ್ಚೆಚ್ಚು ಪ್ರೇಕ್ಷಕರಿಗೆ ನಮ್ಮ ಸಿನಿಮಾ ತಲುಪಲಿದೆ ಎಂದು ಹೇಳಿದ್ದಾರೆ.
ನಾವು ಸಾಮುದಾಯಿಕ ವೀಕ್ಷಣೆಯ ಸಂತೋಷವನ್ನು ಪುನರುಜ್ಜೀವನಗೊಳಿಸಿದ್ದೇವೆ. ಅಲ್ಲದೆ, ಚಿತ್ರೋದ್ಯಮದ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಜಾಗೃತಿ ಮೂಡಿಸಿದ್ದೇವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಂದ ನಾವು ಪಡೆದ ಪ್ರೀತಿ, ಪ್ರತಿಕ್ರಿಯೆಗಳು ಮತ್ತು ಪ್ರೋತ್ಸಾಹವನ್ನು ಟ್ರೈಲರ್ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ನಮಸ್ತೆ ಘೋಸ್ಟ್ ಸಿನಿಮಾ ಸಾರ್ವಜನಿಕ ಮತ್ತು ಟ್ರಾಫಿಕ್ ವಲಯಗಳಲ್ಲಿ ಇಯರ್‌ಫೋನ್‌ಗಳನ್ನು ಧರಿಸುವುದರಿಂದ ಉಂಟಾಗುವ ಅಪಾಯಗಳನ್ನು ಕೇಂದ್ರೀಕರಿಸುತ್ತದೆ. ಚಿತ್ರದ ಕಥಾನಾಯಕ ಶಿವನಿಗೆ ಪ್ರತೀನಿತ್ಯ ಕನಸೊಂದು ಕಾಡುತ್ತಿರುತ್ತದೆ. ಈ ಕನಸಿನ ಹಿಂದಿನ ರಹಸ್ಯವನ್ನು ಬಿಚ್ಚಿಡುವ ಅನ್ವೇಷಣೆಯಲ್ಲಿ ಕಥಾನಾಯಕ ತೊಡಗುತ್ತಾನೆ. ಇದರ ಪಯಣ ಹಾಗೂ ಎದುರಾಗುವ ಸವಾಲುಗಳು ಚಿತ್ರದ ಕಥಾಹಂದರವಾಗಿದೆ.
ಚಿತ್ರದಲ್ಲಿ ಭರತ್ ನಂದ ಅವರಿಗೆ ವಿದ್ಯಾ ರಾಜ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಬಾಲ ರಾಜುವಾಡಿ ,ಶಿವಮೊಗ್ಗ ಹರೀಶ್, ಶಿವಕುಮಾರ್ ಆರಾಧ್ಯ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಶೀರ್ಷಿಕೆ ನೋಡಿದರೆ ಇದು ಹಾರರ್ ಸಿನಿಮಾ ಎಂಬುದು ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ಹಾರರ್ ಮಾತ್ರವಲ್ಲದೇ ಕಾಮಿಡಿ ಕೂಡ ಇದೆ. ‘ನಮಸ್ತೆ ಗೋಷ್ಟ್’ ಸಿನಿಮಾವನ್ನು ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಯದುನಂದನ್ ಅವರ ಸಂಗೀತ ನಿರ್ದೇಶನ ಮತ್ತು ವಿನಯ್ ಕುಮಾರ್ ಅವರ ಸಂಕಲನದಲ್ಲಿ ಈ ಚಿತ್ರ ಮೂಡಿಬಂದಿದೆ.