ಸಿನಿಮಾ ಸುದ್ದಿ

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಶೂಟಿಂಗ್ ಪೂರ್ಣ: ಇದೊಂದು ಅದ್ಭುತ ಅನುಭವ ಎಂದ ಹೇಮಂತ್ ರಾವ್

Shilpa D

ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರೀಕರಣ ಮುಕ್ತಾಯವಾಗಿದೆ.

‘ಚಾರ್ಲಿ 777’ಚಿತ್ರ ಬಿಡುಗಡೆ ಬಳಿಕ ನಟ ರಕ್ಷಿತ್‌ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದರು. ಇದೀಗ ಚಿತ್ರದ ಕುರಿತು ನಟ ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ಮಹತ್ವದ ಅಪ್‌ಡೇಟ್‌ ನೀಡಿದ್ದಾರೆ.

137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ..’ ಎಂದು ‘ಸಪ್ತ ಸಾಗರದಾಚೆ’ ಚಿತ್ರೀಕರಣ ಮುಕ್ತಾಯಗೊಂಡಿರುವ ಸುದ್ದಿಯನ್ನು ತಮ್ಮ ಸಾಮಾಜಿಕ ಮಾಧ್ಯಮ ತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯುವ ವಿಡಿಯೊ ಶೇರ್‌ ಮಾಡಿದ್ದಾರೆ.

ಚಿತ್ರಮಂದಿರದಲ್ಲಿ ಸಪ್ತ ಸಾಗರದ ಅಲೆ ಪ್ರಾರಂಭವಾದಾಗ ನೀವು ನಿಮ್ಮ ಪಾತ್ರರೊಂದಿಗೆ ಚಿತ್ರ ವೀಕ್ಷಿಸುವಿರಿ ಎಂಬ ಭರವಸೆ ಇದೆ ಎಂದು ರಕ್ಷಿತ್‌ ಶೆಟ್ಟಿ ಬರೆದುಕೊಂಡಿದ್ದಾರೆ. ಗೋಧಿಬಣ್ಣ ಸಾಧಾರಣ ಮೈಕಟ್ಟು' ನಂತರ ನಟ ರಕ್ಷಿತ್‌ ಶೆಟ್ಟಿ, ನಿರ್ದೇಶಕ ಹೇಮಂತ್‌ ರಾವ್‌, ಸಂಗೀತ ನಿರ್ದೇಶಕ ಚರಣ್ ರಾಜ್‌ ಮತ್ತೆ ‘ಸಪ್ತ ಸಾಗರ’ದಲ್ಲಿ ಒಂದಾಗಿದ್ದಾರೆ.

ಚಿತ್ರದ ಮೊದಲ ಟೀಸರ್‌ ಅಭಿಮಾನಿಗಳ ಗಮನ ಸೆಳೆದಿತ್ತು. ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ ನಟಿಸುತ್ತಿದ್ದು, ಅವರ ಗೆಟಪ್‌ನಿಂದ ಇದೊಂದು ಸುಂದರ ಪ್ರೇಮ ಕಥೆ ಇರುವ ಚಿತ್ರವೆಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ‘ಚಾರ್ಲಿ’ ಬಳಿಕ ರಕ್ಷಿತ್‌ ಶೆಟ್ಟಿ ಅತ್ಯಂತ ಭರವಸೆ ಇಟ್ಟುಕೊಂಡಿರುವ ಚಿತ್ರವಿದು. ಈ ಬಗ್ಗೆ ಅವರು ಸಾಕಷ್ಟು ಸಲ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ರಕ್ಷಿತ್‌ ಶೆಟ್ಟಿ ತಮ್ಮದೇ ‘ಪರಂವ’ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಥೆಯಲ್ಲಿ ಹಲವು ಶೇಡ್‌ಗಳಿವೆ. ಒಂದು ಶೇಡ್‌ನಲ್ಲಿ ರಕ್ಷಿತ್‌ ಕೈದಿಯಾಗಿರುತ್ತಾರೆ ಎಂದು ನಿರ್ದೇಶಕ ಹೇಮಂತ್‌ರಾವ್‌ ಈ ಹಿಂದೆ ಹೇಳಿದ್ದರು.

ತಯಾರಕರು ಈಗಾಗಲೇ ಪೋಸ್ಟ್-ಪ್ರೊಡಕ್ಷನ್ ಕೆಲಸವನ್ನು ಪ್ರಾರಂಭಿಸಿದ್ದು ಭರದಿಂದ ಸಾಗುತ್ತಿದೆ. “ಸಪ್ತ ಸಾಗರದಾಚೆ ಎಲ್ಲೋ ಚಿತ್ರಮಂದಿರಕ್ಕೆ ತರಲು ನನಗೆ ಕಾಯಲು ಸಾಧ್ಯವಿಲ್ಲ. ನಾವು ಜುಲೈನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ನಿರ್ದೇಶಕ ಹೇಮಂತ್ ರಾವ್  ಹೇಳುತ್ತಾರೆ.

SCROLL FOR NEXT