ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮರಾಠಿ ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ವಿಜಯ್ ಕದಂ ಅವರು ಶನಿವಾರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
66 ವರ್ಷದ ಕದಂ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಂತಿಮವಾಗಿ ಇಂದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತು ಕೊನೆಯುಸಿರೆಳೆದಿದ್ದಾರೆ.
ರಂಗಭೂಮಿಯಲ್ಲಿ ಬಾಲ ನಟನಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ವಿಜಯ್ ಕದಂ ಅವರು 1980 ರ ದಶಕದಲ್ಲಿ ಹಾಸ್ಯ ಪಾತ್ರಗಳ ಮೂಲಕ ಖ್ಯಾತಿ ಗಳಿಸಿದರು.
ವಿಜಯ್ ಕದಂ ಅವರು ಮರಾಠಿ ಚಿತ್ರರಂಗದಲ್ಲಿ ಮಾತ್ರವಲ್ಲ, ಮರಾಠಿ ರಂಗಭೂಮಿಯಲ್ಲೂ ಚಿರಪರಿಚಿತರು. ಅವರು ಅನೇಕ ಹಿಟ್ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರವಾಸ, ಸಾಹಿ ದೇ ಸಾಹಿ, ವಿಚ್ಚಾ ಮಾಝಿ ಪುರಿ ಕರಾ, ಪಾಪ ಸಂಗ ಕುನಾಚೆ ಅವರ ಅತ್ಯಂತ ಜನಪ್ರಿಯ ಸೀರಿಯಲ್ ಗಳಾಗಿವೆ.
ವಿಜಯ್ ಕದಂ ಅನೇಕ ಮರಾಠಿ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ನಿಧನದಿಂದ ಮರಾಠಿ ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ.
"ಇರ್ಸಾಲ್ ಕಾರ್ತಿ", "ವಾಸುದೇವ್ ಬಲ್ವಂತ್ ಫಡ್ಕೆ" ಮತ್ತು "ಹಲಾದ್ ರುಸ್ಲಿ ಕುಂಕು ಹಸ್ಲಾ" ಸೇರಿದಂತೆ ಹಲವು ಮರಾಠಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. "ಘರ್ ಏಕ್ ಮಂದಿರ್" ಮತ್ತು "ಅಫ್ಲಾಟೂನ್" ನಂತಹ ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕದಂ ಅಭಿನಯಿಸಿದ್ದಾರೆ.