ಹೈದರಾಬಾದ್: ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಮತ್ತು ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನ Pushpa 2 The Rule ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಚಿತ್ರ ಇದೀಗ ಸಾವಿರ ಕೋಟಿ ರೂ ಗಳ ಕ್ಲಬ್ ಸೇರಿದೆ.
ಹೌದು.. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಪುಷ್ಪ 2 ಚಿತ್ರದ ಓಟ ಮುಂದುವರೆದಿದ್ದು, ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇದೀಗ ಸಾವಿರ ಕೋಟಿ ಕ್ಲಬ್ ಸೇರಿದೆ. ಅಂತೆಯೇ ವೇಗವಾಗಿ ಸಾವಿರ ಕೋಟಿ ರೂ ಕ್ಲಬ್ ಸೇರಿದ ಮೊದಲ ಭಾರತೀಯ ಚಿತ್ರ ಎಂಬ ಕೀರ್ತಿಗೂ ಪುಷ್ಪ 2 ಪಾತ್ರವಾಗಿದೆ.
ಪುಷ್ಪ 2 ಚಿತ್ರ ಬಿಡುಗಡೆಯಾದ ಕೇವಲ 6 ದಿನಗಳಲ್ಲಿ ಈ ಸಾಧನೆ ಮಾಡಿದ್ದು, ಡಿಸೆಂಬರ್ 5 ರಂದು ಹಿಂದಿ, ತಮಿಳು, ಕನ್ನಡ, ಬಂಗಾಳಿ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದ ಪುಷ್ಪ 2: ದಿ ರೂಲ್ ಚಿತ್ರ ಒಟ್ಟಾರೆ 1002 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.
ಆ ಮೂಲಕ ಬಿಡುಗಡೆಯಾದ ಮೊದಲ ವಾರದ ಹೊತ್ತಿಗೆ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೊದಲ ಚಿತ್ರ ಎಂಬ ಕೀರ್ತಿಗೂ ಪುಷ್ಪ 2 ಪಾತ್ರವಾಗಿದೆ.
ಸಾವಿರ ಕೋಟಿ ಕ್ಲಬ್
ಇನ್ನು ಸಾವಿರ ಕೋಟಿ ರೂ ಗಳಿಸಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ದಂಗಲ್, ನಟ ಪ್ರಭಾಸ್ ರ ಬಾಹುಬಲಿ ಮತ್ತು ಕಲ್ಕಿ 2898 AD, SS ರಾಜಮೌಳಿ ನಿರ್ದೇಶನದ RRR, ಬಾಲಿವುಡ್ ನಟ ಶಾರುಖ್ ಖಾನ್ ರ ಪಠಾಣ್ ಮತ್ತು ಜವಾನ್, ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರಗಳಿವೆ. ಈ ಪಟ್ಟಿಗೆ ಇದೀಗ ಪುಷ್ಪ 2 ಸೇರ್ಪಡೆಯಾಗಿದೆ.
ದೇಶೀಯ ಮಾರುಕಟ್ಟೆಯಲ್ಲೂ ಪುಷ್ಪ2 ದಾಖಲೆ ಗಳಿಕೆ
ಇನ್ನು ಭಾರತೀಯ ಬಾಕ್ಸ್ ಆಫೀಸ್ ನಲ್ಲೂ ಪುಷ್ಪ2 ದಾಖಲೆಯ ಗಳಿಕೆ ಕಂಡಿದ್ದು, ಮೊದಲ ವಾರಾಂತ್ಯದ ಹೊತ್ತಿಗೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಲಾ 100 ಕೋಟಿ ಗಳಿಸಿದ ಮೊದಲ ಭಾರತೀಯ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿತ್ತು.
ಕಡಿಮೆ ಅವಧಿಯಲ್ಲಿ 500 ಕೋಟಿ ರೂ ಗಳಿಸಿದ ಮೊದಲ ಚಿತ್ರ
ಇದೇ ವೇಳೆ ಪುಷ್ಪ 2 ಚಿತ್ರದ ಬಾಕ್ಸ್ ಆಫೀಸ್ ಗಳಿಕೆ 3 ದಿನಕ್ಕೆ 600 ಕೋಟಿ ರೂ ದಾಟಿತ್ತು. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ 500 ಕೋಟಿ ರೂ ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಿತ್ತು.
ಇದಲ್ಲದೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಓಪನಿಂಗ್ ಗಳಿಸಿದ ಚಿತ್ರಗಳ ದಾಖಲೆಯನ್ನು ಪುಷ್ಪ2 ಮುರಿದಿದ್ದು, ಇದಕ್ಕೂ ಮೊದಲು SS ರಾಜಮೌಳಿಯವರ RRR (Rs 223.5 ಕೋಟಿ), ಬಾಹುಬಲಿ 2 (Rs 217 ಕೋಟಿ) ಮತ್ತು ಕಲ್ಕಿ 2898 AD (Rs 175 ಕೋಟಿ) ಗೆ ಸೇರಿತ್ತು.