ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ಅಭಿನಯಿಸಿರುವ ಯುಐ ಸಿನಿಮಾ ಇದೇ 20ರಂದು ತೆರೆಗೆ ಬರಲು ಸಜ್ಜಾಗಿದೆ. ಈ ನಡುವಲ್ಲೇ ಚಿತ್ರದ ಟ್ರೈಲರ್'ಗೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾನು ಉಪೇಂದ್ರ ಅವರ ಫ್ಯಾನ್ ಎಂದೂ ಹೇಳಿದ್ದಾರೆ.
ಅಮಿರ್ ಖಾನ್ ಜೊತೆಗಿರುವ ವಿಡಿಯೋವನ್ನು ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಮೀರ್ ಖಾನ್ ಅವರು, ನಾನು ಅಭಿಮಾನಿಯಾಗಿರುವ ಪ್ರತಿಭಾವಂತರೊಬ್ಬರ ಸಿನಿಮಾ ಡಿ.20ಕ್ಕೆ ಬಿಡುಗಡೆಯಾಗುತ್ತಿದೆ. ಟ್ರೇಲರ್ ಮೈ ನವಿರೇಳಿಸುವಂತಿದೆ. ಟ್ರೈಲರ್ ನೋಡಿ ನಾನು ಥ್ರಿಲ್ ಆದೆ. ಆ ಪ್ರತಿಭಾವಂತ ಮತ್ಯಾರೂ ಅಲ್ಲ. ನನ್ನ ಗೆಳೆಯ ಉಪೇಂದ್ರ. ಈ ಸಿನಿಮಾ ಖಂಡಿತಾ ಸೂಪರ್ ಹಿಟ್ ಆಗುತ್ತದೆ. ಹಿಂದಿ ಪ್ರೇಕ್ಷಕರೂ ಚಿತ್ರವನ್ನು ಬಹಳ ಇಷ್ಟಪಡುತ್ತಾರೆ. ಇದು ನಿಜಕ್ಕೂ ಶಾಂಕಿಗ್ ಆಗಿತ್ತು. ಅಮೇಜಿಂಗ್ ಟ್ರೇಲರ್ ಎಂದು ಹೇಳಿದ್ದಾರೆ.
ಅಮೀರ್ ಖಾನ್ ಅವರ ಮೆಚ್ಚುಗೆ ಮತ್ತು ಹಾರೈಕೆಗೆ ನಟ ಉಪೇಂದ್ರ ಕೃತಜ್ಞತೆ ತಿಳಿಸಿದ್ದಾರೆ. ಇದು "ಕನಸು ನನಸಾಗುವ" ಕ್ಷಣ ಎಂದು ಎಂದು ಉಪೇಂದ್ರ ಅವರು ಬರೆದಿದ್ದಾರೆ. ನಿಮ್ಮನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಬಹು ವರ್ಷಗಳ ಕನಸು ಇಂದು ನನಸಾಗಿದೆ. ಯುಐ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ತುಂಬಾ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಉಪೇಂದ್ರ ಅವರು ತಮ್ಮ ಬಹು ನಿರೀಕ್ಷಿತ ಫ್ಯೂಚರಿಸ್ಟಿಕ್ ಚಿತ್ರ 'ಯುಐ' ಚಿತ್ರ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಚಿತ್ರವು ಈಗಾಗಲೇ U/A ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, 2 ಗಂಟೆ 10 ನಿಮಿಷಗಳ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಸಿಕ್ಕಿದೆ.
ಯುಐನ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದನ್ನು ಟ್ರೈಲರ್ ಅಲ್ಲ ವಾರ್ನರ್ ಎಂದು ಉಪ್ಪಿ ಕರೆದಿದ್ದರು. ಆ ವಾರ್ನರ್ ಕೊಂಚ ಡಿಫರೆಂಟ್ ಆಗಿದ್ದು, ಜಗತ್ತು ತಂತ್ರಜ್ಞಾನವನ್ನು ಹೆಚ್ಚಾಗಿ ಅವಲಂಬಿಸಿದರೆ, ಮೂಲಭೂತವಾದಕ್ಕೆ ಹೆಚ್ಚಾಗಿ ಅಂಟಿಕೊಂಡರೆ 2040ರ ಹೊತ್ತಿಗೆ ಭೂಮಿಯಲ್ಲಿ ಆಗಬಹುದಾದ ತಲ್ಲಣಗಳನ್ನು ಚಿತ್ರದಲ್ಲಿ ತೋರಿಸಿರುವ ಬಗ್ಗೆ ಯುಐ ವಾರ್ನರ್ ಸ್ಪಷ್ಟವಾಗಿ ಹೇಳಿದೆ.
'ಯುಐ' ಸಿನಿಮಾವನ್ನು ವೀನಸ್ ಎಂಟರ್‌ಟೈನ್‌ಮೆಂಟ್ ಮತ್ತು ಲಹರಿ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿದ್ದು, ನಟ ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಚಿತ್ರ ಇದಾಗಿದೆ. ನಟ ಸಾಧು ಕೋಕಿಲಾ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ, ರವಿಶಂಕರ್, ನಿಧಿ ಸುಬಯ್ಯ ಮುಂತಾದವರು ನಟಿಸಿದ್ದು, ಬಿ.ಅ ಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರಕ್ಕೆ ಜಿ.ಮನೋಹರನ್, ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.