ಹೈದರಾಬಾದ್: ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾವಶ್ಯಕವಾಗಿ ತಮ್ಮ ಮೇಲೆ ಆರೋಪಗಳನ್ನು ಮಾಡಲಾಗುತ್ತಿದ್ದು, 'ತಪ್ಪು ಮಾಹಿತಿ' ಹರಡಿ ವರ್ಚಸ್ಸಿಗೆ ಧಕ್ಕೆ ತಂದು ಚಾರಿತ್ರ್ಯ ಹರಣ ಮಾಡಲು ಯತ್ನಿಸಲಾಗುತ್ತಿದೆ ಎಂದು ನಟ ಅಲ್ಲು ಅರ್ಜುನ್ ಹೇಳಿದ್ದಾರೆ.
ಪುಷ್ಪ 2 ಸಿನಿಮಾ ಬಿಡುಗಡೆ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಮಹಿಳೆ ಸಾವನ್ನಪ್ಪಿ ಆಕೆಯ ಮಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಇದೇ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಬಂಧನಕ್ಕೀಡಾಗಿ ಬಿಡುಗಡೆ ಕೂಡ ಆಗಿದ್ದರು.
ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ಕುರಿತು ಆಡಿರುವ ಮಾತುಗಳು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ನಟ ಅಲ್ಲು ಅರ್ಜುನ್ ಸುದ್ದಿಗೋಷ್ಠಿ ಕರೆದು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
'ನನ್ನ ವಿರುದ್ಧದ ಆರೋಪಗಳು ಅವಮಾನಕರ.. ಕಾಲ್ತುಳಿತ ಪ್ರಕರಣದಲ್ಲಿ "ಸಾಕಷ್ಟು ತಪ್ಪು ಮಾಹಿತಿ" ಹರಡಲಾಗುತ್ತಿದೆ. ನಾನು ಯಾರನ್ನೂ, ಯಾವುದೇ ಇಲಾಖೆಯನ್ನು ಅಥವಾ ರಾಜಕೀಯ ನಾಯಕರನ್ನು ದೂಷಿಸಲು ಪ್ರಯತ್ನಿಸುತ್ತಿಲ್ಲ... ಇದು ಅವಮಾನಕರ ಮತ್ತು ಇಲ್ಲ ಸಲ್ಲದ ಆರೋಪಗಳ ಮೂಲಕ ನನ್ನ ವರ್ಚಸ್ಸನ್ನು ಹಾಳು ಮಾಡಲಾಗುತ್ತಿದೆ ಎಂಬಂತೆ ಭಾಸವಾಗುತ್ತಿದೆ.
ದಯವಿಟ್ಟು ನನ್ನನ್ನು ಹೀಗೇ ಎಂದು ನೀವೇ ನಿರ್ಣಯಿಸಬೇಡಿ.. ಆ ಘಟನೆ ದುರದೃಷ್ಟಕರ.. ಅದು ಆಗಬಾರದಾಗಿತ್ತು. ಅದಕ್ಕೆ ನಾನು ವಿಷಾದಿಸುತ್ತೇನೆ. ನನಗೆ ಅದೇ ವಯಸ್ಸಿನ ಮಗುವಿದೆ, ನನಗೆ ನೋವು ಅನಿಸುವುದಿಲ್ಲವೇ? ಇದೊಂದು ಅನಿರೀಕ್ಷಿತ ಘಟನೆ.. ಯಾರನ್ನೂ ದೂಷಿಸಬಾರದು' ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಅಂತೆಯೇ ಪೊಲೀಸರ ಅನುಮತಿ ಮೇರೆಗೆ ತಾವು ಥಿಯೇಟರ್ ಗೆ ಹೋಗಿದ್ದು ಎಂದು ಹೇಳಿದ ಅಲ್ಲು ಅರ್ಜುನ್, 'ಥಿಯೇಟರ್ ಆಡಳಿತ ಮಂಡಳಿಯಿಂದ ಅನುಮತಿ ಪಡೆಯಲಾಯಿತು. ಪೊಲೀಸರು ದಾರಿಯನ್ನು ತೆರವುಗೊಳಿಸಿದರು, ಆದ್ದರಿಂದ ನಾನು ಒಳಗೆ ಹೋದೆ. ನಾನು ಕಾನೂನು ಪಾಲಿಸುವ ನಾಗರಿಕ. ಅನುಮತಿ ಇಲ್ಲ ಎಂದು ನನಗೆ ಹೇಳಿದ್ದರೆ ನಾನು ವಾಪಸ್ ಹೊರಟು ಹೋಗುತ್ತಿದ್ದೆ ಎಂದು ಹೇಳಿದ್ದಾರೆ.
ಅಲ್ಲದೆ ರೋಡ್ ಶೋ ಕುರಿತು ಮಾತನಾಡಿದ ಅಲ್ಲು ಅರ್ಜುನ್, 'ನಾನು ಯಾವುದೇ ರೋಡ್‌ಶೋ ನಡೆಸಲಿಲ್ಲ. ಯಾವುದೇ ಪೊಲೀಸ್ ಅಧಿಕಾರಿ ನನ್ನನ್ನು ಹೊರಗೆ ಹೋಗಲು ಹೇಳಲಿಲ್ಲ. ನನ್ನ ಸ್ವಂತ ಮ್ಯಾನೇಜರ್ ನನ್ನ ಬಳಿ ಬಂದು ನಿಯಂತ್ರಿಸಲಾಗದಷ್ಟು ಜನಸಂದಣಿ ಇದೆ ಎಂದು ನನಗೆ ಹೇಳಿದರು. ಹೀಗಾಗಿ ನಾನು ಹೊರಗೆ ಬಂದೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ಆಕ್ರೋಶ
ಇನ್ನು ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಮತ್ತು ನಟ ಅಲ್ಲು ಅರ್ಜುನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಐಎಂ ಸದಸ್ಯ ಅಕ್ಬರುದ್ದೀನ್ ಒವೈಸಿ ಕೇಳಿದ ಪ್ರಶ್ನೆಗೆ ತೆಲಂಗಾಣ ವಿಧಾನಸಭೆ ಕಲಾಪದಲ್ಲಿ ಉತ್ತರಿಸಿದ ಸಿಎಂ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರ ಅನುಮತಿ ನಿರಾಕರಿಸಲ್ಪಟ್ಟಿದ್ದರೂ ಸಹ, ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ಗೆ ಆಗಮಿಸಿದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ಹೇಳಿದ್ದರು.