ತಮ್ಮ ನಿರ್ದೇಶನದ ಮುಂಬರುವ ಚಿತ್ರ ರಾಯಲ್ ಬಿಡುಗಡೆಗೆ ತಯಾರಿ ನಡೆಸುತ್ತಿರುವ ನಿರ್ದೇಶಕ ದಿನಕರ್ ತೂಗುದೀಪ ಅವರು ಇತ್ತೀಚೆಗೆ ತಮ್ಮ ಸಹೋದರ, ನಟ ದರ್ಶನ್ ತೂಗುದೀಪ ಅವರೊಂದಿಗಿನ ಭಿನ್ನಾಭಿಪ್ರಾಯದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಸಾರ್ವಜನಿಕವಾಗಿ ನಾವು ಕಡಿಮೆ ಕಾಣಿಸಿಕೊಂಡರೂ, ನಮ್ಮ ಬಂಧವು ಗಟ್ಟಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
'ನಮ್ಮ ಕುಟುಂಬದ ಡೈನಾಮಿಕ್ಸ್ ತನ್ನದೇ ಆದ ಸಂಕೀರ್ಣತೆಗಳನ್ನು ಹೊಂದಿದೆ. ನಾವು ಸಾಂದರ್ಭಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ, ನಮ್ಮ ಕೌಟುಂಬಿಕ ಸಂಬಂಧಗಳು ಹಾಗೇ ಉಳಿದಿವೆ. ಮಾತುಕತೆ ಕಡಿಮೆಯಾದರೂ ಸಹ, ನಮ್ಮ ಕುಟುಂಬದ ಬಂಧ ಹಾಗೆಯೇ ಸಹ ಉಳಿಯುತ್ತದೆ' ಎಂದು ದಿನಕರ್ ವಿವರಿಸಿದರು.
ದರ್ಶನ್ ಅವರಿಗಾಗಿ ಚಿತ್ರ ನಿರ್ದೇಶಿಸುವ ಬಗ್ಗೆ ಮಾತನಾಡಿದ ಅವರು, ಇದು ಭವಿಷ್ಯದಲ್ಲಿನ ಸಾಧ್ಯತೆ. ನನ್ನ ಸಹೋದರನೊಂದಿಗೆ ಸಿನಿಮಾ ಮಾಡುವುದು ಖಂಡಿತವಾಗಿಯೂ ನನ್ನ ಮುಂದಿದೆ. ಆದರೆ, ಆ ಯೋಜನೆಯು 2026 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ದರ್ಶನ್ ಅವರು ನನ್ನ ಚಿತ್ರದಲ್ಲಿ ಕೆಲಸ ಮಾಡಲು ಮುಂದಾಗುವ ಮುನ್ನ ಅವರ ಎರಡು ಸಿನಿಮಾಗಳು ಪೂರ್ಣಗೊಳ್ಳಬೇಕಿದೆ' ಎಂದು ಅವರು ಬಹಿರಂಗಪಡಿಸಿದರು.
ದರ್ಶನ್ ಅವರ ಆರೋಗ್ಯದ ಬಗ್ಗೆ ಮಾತನಾಡಿದ ದಿನಕರ್, ದರ್ಶನ್ ಸದ್ಯ ಮೈಸೂರಿನಲ್ಲಿ ತಮ್ಮ ಕುಟುಂಬದ ವೈದ್ಯ ಡಾ. ಅಜಯ್ ಹೆಗ್ಡೆ ಅವರ ಮೇಲ್ವಿಚಾರಣೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಅವರು ತೀವ್ರ ಅಸ್ವಸ್ಥತೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆ. ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯನ್ನು ನಿರ್ಧರಿಸಲು ವೈದ್ಯರು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ' ಎಂದು ವಿವರಿಸಿದರು.
ದರ್ಶನ್ ಅವರ ಚಿತ್ರದ ಜೊತೆಗೆ ತಮ್ಮ ಸೋದರಳಿಯ ಚಂದು ಅವರನ್ನೂ ಚಿತ್ರರಂಗಕ್ಕೆ ಲಾಂಚ್ ಮಾಡಲು ದಿನಕರ್ ತಯಾರಿ ನಡೆಸಿದ್ದಾರೆ. 'ನಾನು ಸದ್ಯ ವಿಶೇಷವಾಗಿ ಚಂದುಗಾಗಿ ಸ್ಕ್ರಿಪ್ಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ರಾಯಲ್ ಸಿನಿಮಾ ಬಿಡುಗಡೆ ಬಳಿಕ ಇದುವೇ ನನ್ನ ಮೊದಲ ಆದ್ಯತೆಯಾಗಿರುತ್ತದೆ' ಎಂದರು.