ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಚೈತ್ರಾ ಆಚಾರ್ ಅವರು ಇದೀಗ ಕಾಲಿವುಡ್ ನಲ್ಲಿ ಮಿಂಚುತ್ತಿದ್ದು, ತಮಿಳಿನ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದಲ್ಲಿ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾ ‘ಇಂಡಿಯನ್ 2’ ಚಿತ್ರದಲ್ಲಿ ಸಿದ್ಧಾರ್ಥ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಶ್ರೀಗಣೇಶ್ ಅಭಿನಯದ ಹೊಸ ಚಿತ್ರವೊಂದರಲ್ಲಿ ಅವರು ನಟಿಸುತ್ತಿದ್ದು, ಈ ಚಿತ್ರಕ್ಕೆ ಚೈತ್ರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದು ಸಿದ್ಧಾರ್ಥ್ ಅಭಿನಯದ 40ನೇ ಚಿತ್ರವಾಗಿರುವುದರಿಂದ, ಚಿತ್ರಕ್ಕೆ ಸದ್ಯಕ್ಕೆ ‘ಸಿದ್ಧಾರ್ಥ್ 40’ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಶರತ್ ಕುಮಾರ್ ಮತ್ತು ದೇವಯಾನಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದು ಚೈತ್ರಾ ಒಪ್ಪಿಕೊಂಡ ಮೊದಲ ಚಿತ್ರವಂತೆ. ಆದರೆ, ಸ್ವಲ್ಪ ತಡವಾಗಿದ್ದರಿಂದ ಮೊದಲು ಶಶಿಕುಮಾರ್ ಅಭಿನಯದ ಚಿತ್ರ ಪ್ರಾರಂಭವಾಗಿ, ಇದು ಎರಡನೆಯ ಚಿತ್ರವಾಗಿ ಪ್ರಾರಂಭವಾಗುತ್ತಿದೆ. ಮೂರು ತಿಂಗಳ ಹಿಂದೆಯೇ ಈ ಚಿತ್ರವನ್ನು ಒಪ್ಪಿದ್ದು, ಈಗ ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದೆ.
ಇದು ನಾನು ತಮಿಳಿನಲ್ಲಿ ಸಹಿ ಮಾಡಿದ ಮೊದಲ ಸಿನಿಮಾ, ಈ ಚಿತ್ರ ನನಗೆ ಅತ್ಯಂತ ವಿಶೇಷವಾಗಿದೆ. ಚಿತ್ರ ತಂಡದ ಭಾಗವಾಗಲು ಉತ್ಸುಕಳಾಗಿದ್ದೇನೆ. ಸಿದ್ಧಾರ್ಥ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನಿರ್ದೇಶಕರು ಪ್ರತಿಭಾವಂತರು ಮಾತ್ರವಲ್ಲ, ಉತ್ತಮ ಬರಹಗಾರರೂ ಕೂಡ ಆಗಿದ್ದಾರೆ. ಇಂತಹ ಕ್ರಿಯಾತ್ಮಕ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಮೂರು ತಿಂಗಳಿನಿಂದಲೂ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದ್ದು, ಅಂತಿಮವಾಗಿ ಈಗ ಪ್ರಾರಂಭವಾಗುತ್ತಿದ್ದು, ರೋಮಾಂಚನಗೊಂಡಿದ್ದೇನೆಂದು ಹೇಳಿದ್ದಾರೆ.
ಇದಲ್ಲದೆ, ಶಿವರಾಜಕುಮಾರ್ ಮತ್ತು ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರದಲ್ಲೂ ಚೈತ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಅಲ್ಲದೆಸ, ‘ಹ್ಯಾಪಿ ಬರ್ಥ್‍ಡೇ ಟು ಮಿ’ ಎಂಬ ಮತ್ತೊಂದು ಚಿತ್ರದಲ್ಲೂ ಚೈತ್ರಾ ನಟಿಸಿದ್ದು, ಅದು ಇತ್ತೀಚೆಗೆ ಓಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗಿದೆ.