ಇತ್ತೀಚಿಗೆ ಆತ್ಮಹತ್ಯೆಗೆ ಶರಣಾಗಿದ್ದ ಕನ್ನಡದ ಟಿವಿ ಧಾರಾವಾಹಿ ನಿರ್ದೇಶಕ ವಿನೋದ್ ದೋಂಡಾಳೆ, ತಮ್ಮ ಚೊಚ್ಚಲ 'ಅಶೋಕ ಬ್ಲೇಡ್'' ಸಿನಿಮಾಕ್ಕಾಗಿ 3 ಕೋಟಿ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪಾಲುದಾರ ಮತ್ತು ಚಿತ್ರ ನಿರ್ಮಾಪಕ ವೃದ್ಧಿ ಕ್ರಿಯೇಷನ್‌ನ ವರ್ಧನ್ ಹರಿ ಹೇಳಿದ್ದಾರೆ.
'ಅಶೋಕ ಬ್ಲೇಡ್'' ವಿನೋದ್ ವಿ. ದೊಂಡಾಲೆ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು.ಇದು 1970 ರ ದಶಕದ ಸಾಮಾಜಿಕ ಚಿತ್ರವಾಗಿದ್ದು, ಟಿಕೆ ದಯಾನಂದ್ ಚಿತ್ರಕಥೆ ಬರೆದಿದ್ದು, ಸತೀಶ್ ನೀನಾಸಂ ನಾಯಕರಾಗಿ ನಟಿಸುತ್ತಿದ್ದಾರೆ. ಇದು ದೊಂಡಲೆ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ಮೇ 2023 ರಿಂದ ಶೂಟಿಂಗ್ ನಡೆಯುತಿತ್ತು.
ಶೂಟಿಂಗ್ ದಿನಗಳ ಸಂಖ್ಯೆ ಯೋಜಿಸಿದಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿತ್ತು. ಮೊದಲು ನಾವು 45 ದಿನಗಳ ಕಾಲ ಯೋಜಿಸಿದ್ದೇವೆ, ಆದರೆ 87 ದಿನ ಚಿತ್ರೀಕರಣ ಮಾಡಿದ್ದೇವು. ಮೂಲ ಬಜೆಟ್ ಸುಮಾರು 1.5 ಕೋಟಿ ಆಗಿತ್ತು. ಆದರೆ ಅದು ಹಲವು ಬಾರಿ ಹೆಚ್ಚಾಯಿತು. ಈಗ ಕೆಲವು ದೃಶ್ಯಗಳು, ಒಂದು ಹಾಡು ಮತ್ತು ಫೈಟ್ ಸೀಕ್ವೆನ್ಸ್ ರೀಶೂಟ್ ಮಾಡಬೇಕಾಗಿದೆ. ಇದಕ್ಕೆಲ್ಲ ಹೆಚ್ಚಿನ ಹಣದ ಅಗತ್ಯವಿದೆ ಎಂದು ಹರಿ ಹೇಳಿದರು.
ಇಂತಹ ಘಟನೆಗಳನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ನೀನಾಸಂ ಸತೀಶ್ ಆಘಾತ ವ್ಯಕ್ತಪಡಿಸಿದರು. ಚಿತ್ರವು ಶೇ.90 ರಷ್ಟು ಪೂರ್ಣಗೊಂಡಿದೆ. ಉಳಿದ ಭಾಗಗಳನ್ನು ಮುಂದಿನ ತಿಂಗಳು ಶೂಟ್ ಮಾಡಲು ನಿರ್ಧರಿಸಿದ್ದೇವೆ. ಇದು ಇನ್ನೂ 20 ರಿಂದ 25 ದಿನಗಳನ್ನು ತೆಗೆದುಕೊಳ್ಳುತ್ತದೆ. ಧೋಂಡಲೆ ಅದ್ಬುತ ವ್ಯಕ್ತಿಯಾಗಿದ್ದರು ಎಂದು ನೀನಾಸಂ ಹೇಳಿದರು.
ಮತ್ತೊಬ್ಬ ನಿರ್ಮಾಪಕರೊಂದಿಗೆ ಜುಲೈ 19 ರಂದು ಸಭೆ ನಂತರ ಅವರನ್ನು ಮನೆಗೆ ಡ್ರಾಪ್ ಮಾಡಿದೆ. ಆಗ ಅವರು ಸ್ಲಲ್ಪ ನಿರಾಳರಾಗಿ ಕಂಡುಬಂದರು. ಅವರು ಈಗಾಗಲೇ ಸಾಕಷ್ಟು ಹಣ ವೆಚ್ಚ ಮಾಡಿದ್ದರಿಂದ ಚಿಂತಿತರಾಗಿದ್ದರು. ಸಿನಿಮಾವನ್ನು ಮುಂದೆ ಕೊಂಡೊಯ್ಯಲು ಹಣದ ಕೊರತೆ ಅವರನ್ನು ತುಂಬಾ ಕಾಡುತ್ತಿತ್ತು. ಪರಿಹಾರ ಇತ್ತು. ಸಹಾಯಕ್ಕಾಗಿ ಯಾರಾದರೂ ಇದ್ದರು. ಆದರೆ, ಮರುದಿನವೇ ಅವರ ಸಾವಿನ ಸುದ್ದಿಯನ್ನು ನಾನು ನಿರೀಕ್ಷಿಸರಿಲಿಲ್ಲ ಎಂದು 22 ವರ್ಷಗಳಿಗೂ ಹೆಚ್ಚು ಕಾಲ ಧೋಂಡಾಲೆಯೊಂದಿಗೆ ಅನೇಕ ಟಿವಿ ಧಾರಾವಾಹಿಗಳನ್ನು ನಿರ್ಮಿಸಿದ ಹರಿ ಹೇಳಿದರು.
ಧೋಂಡಾಲೆಯವರು ಕರಿಮಣಿ ಮತ್ತು ಶಾಂತಂ ಪಾಪಮ್ ಧಾರಾವಾಹಿಗಳಿಗೆ ಹೆಸರುವಾಸಿಯಾಗಿದ್ದಾರೆ. ಚಂದ್ರಾ ಲೇಔಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ ಎಂ ಭರತ್ ಮಾತನಾಡಿ, ಧೋಂಡಾಲೆಯವರ ಪತ್ನಿ ಗೀತಾ ಸಾವಿನ ಬಗ್ಗೆ ಮಾಹಿತಿ ನೀಡಿದ್ದು, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.
ಎಫ್‌ಐಆರ್‌ನ ಪ್ರಕಾರ ಅಶೋಕ ಬ್ಲೇಡ್ ಸಿನಿಮಾಕ್ಕಾಗಿ ಕರ್ಣಾಟಕ ಬ್ಯಾಂಕ್‌ನಿಂದ ಸುಮಾರು 3 ಕೋಟಿ ರೂಪಾಯಿ ಒಡಿ (ಓವರ್‌ಡ್ರಾಫ್ಟ್) ಸಾಲ ಪಡೆದಿದ್ದರಿಂದ ಅವರು ಸ್ವಲ್ಪ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಧೋಂಡಾಲೆ ಆತ್ಮಹತ್ಯೆಗೂ ಮುನ್ನಾ ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಹೆಂಡತಿ ಮತ್ತು ಮಕ್ಕಳ ಕ್ಷಮೆಯನ್ನು ಕೇಳಿದ್ದಾರೆ ಎಂದು ಅವರು ಹೇಳಿದರು. ಧೋಂಡಾಲೆ ಪತ್ನಿ ಗೀತಾ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರ ಹಿರಿಯ ಮಗ ತನ್ನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 99 ರಷ್ಟು ಗಳಿಸಿದ್ದಾನೆ ಮತ್ತು ಅವರ ಕಿರಿಯ ಮಗಳು ಕೇವಲ ಎಂಟು ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅವರ ಸ್ನೇಹಿತ ಮತ್ತು ನಿರ್ಮಾಪಕ ಹರಿ ಹೇಳಿದರು.