ನಟ ಶ್ರೀಮುರಳಿ ಅಭಿನಯದ ರಥಾವರ ಚಿತ್ರ ನಿರ್ದೇಶನಕ್ಕೆ ಹೆಸರುವಾಸಿಯಾದ ಚಂದ್ರಶೇಖರ್ ಬಂಡಿಯಪ್ಪ ಅವರು ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರೊಂದಿಗೆ ಹೊಸ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಈ ಹಿಂದೆಯೇ ನಾವು ವರದಿ ಮಾಡಿದ್ದೆವು. ಇದೀಗ ಚಿತ್ರಕ್ಕೆ 'ಚೌಕಿದಾರ್' ಎಂದು ಹೆಸರಿಡಲಾಗಿದ್ದು, ಶೀರ್ಷಿಕೆಯನ್ನು ಬಿಡುಗಡೆ ಮಾಡಿದ ನಟ ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ವಿವಿಧ ಭಾಷೆಗಳ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿರುವ ಚೌಕಿದಾರ್ ಕನ್ನಡದಲ್ಲಿ ಮಾತ್ರವಲ್ಲದೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
'ಚೌಕಿದಾರ್' ಅನ್ನು ಅದರ ಶೀರ್ಷಿಕೆಯಿಂದ ಮಾತ್ರ ನಿರ್ಣಯಿಸಬೇಡಿ. ಇದು ಫ್ಯಾಮಿಲಿ ಎಂಟರ್ಟೈನರ್ ಆಗಿದೆ' ಎಂದು ಚಂದ್ರಶೇಖರ್ ಬಂಡಿಯಪ್ಪ ಹೇಳುತ್ತಾರೆ. 'ಈಗಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಕಂಟೆಂಟ್ ಅನ್ನು ವಿಶೇಷವಾಗಿ ರಚಿಸಲಾಗಿದೆ ಮತ್ತು ಪೃಥ್ವಿ ಅಂಬಾರ್ ಈ ಕಥೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ' ಎನ್ನುತ್ತಾರೆ.
ವಿದ್ಯಾ ಶೇಖರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಿಸಲಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ, ವಿ ನಾಗೇಂದ್ರ ಪ್ರಸಾದ್ ಮತ್ತು ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ. ಚಿತ್ರದ ತಾರಾಗಣ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂತಹಂತವಾಗಿ ಬಹಿರಂಗಪಡಿಸಲು ಚಿತ್ರತಂಡ ಯೋಜಿಸಿದೆ. ಈ ನಡುವೆ ಪೃಥ್ವಿ ಅಂಬಾರ್ ಅವರ 'ಭುವನಂ ಗಗನಂ' ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.