ಬ್ರಹ್ಮಚಾರಿ, ಐ ಲವ್ ಯೂ, ಶಿವಾರ್ಜುನ ಮುಂತಾದ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಕೊಡಗಿನ ಕುವರಿ ಅಕ್ಷಿತಾ ಬೋಪಯ್ಯ ಅವರು, ಇದೀಗ ಲವ್/ಫೈ ಚಿತ್ರದ ಮೂಲಕ ಕಾಲಿವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಆರಂಭದಲ್ಲಿ ತಮಿಳು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ ತಮ್ಮ ನಟನಾ ಕೌಶಲ ಪ್ರದರ್ಶಿಸಿದ್ಧ ಅಕ್ಷಿತಾ, ಸಿನಿ ಶಿಖರದ ಒಂದೊಂದೇ ಮೆಟ್ಟಿಲೇರುತ್ತಾ ಇದೀಗ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.
ಕನ್ನಡದ 'ಸಿದ್ಲಿಂಗು 2' ನಿರ್ಮಿಸಿದ್ದ ಬ್ಯಾನರ್‌ನಲ್ಲೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ನಿರ್ಮಾಣವಾಗುತ್ತಿದೆ.
ಕರ್ನಾಟಕದ ಕೊಡಗಿನವರಾದ ಅಕ್ಷಿತಾ, ತಮಿಳು ಪ್ರೇಕ್ಷಕರಿಗೆ ಪರಿಚಯವಾಗುತ್ತಿರುವ ಹೊಸ ನಟಿಯೇನಲ್ಲ. ಈಗಾಗಲೇ ಸೀರಿಯಲ್ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಸೀತಾ ರಾಮನ್, ಕಣ್ಣನ ಕನ್ನೆ, ತಾಜಂಪೂ ಮತ್ತು ಸುಮಂಗಲಿಯಂತಹ ತಮಿಳು ಟಿವಿ ಧಾರಾವಾಹಿಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇದೀಗ ಲವ್/ಫೈ ಚಿತ್ರದಲ್ಲಿ ನಟಿಸುತ್ತಿದ್ದು, ಇದು ತಮಿಳಿನಲ್ಲ ಅವರ ಮೊದಲ ಚಿತ್ರವಾಗಿದೆ.
ಸಿನಿಮಾಗಳ ಮೇಲೆ ಗಮನ ಹರಿಸುವ ಸಲುವಾಗಿಯೇ ನಾನು ಧಾರಾವಾಹಿಗಳಿಂದ ವಿರಾಮ ತೆಗೆದುಕೊಂಡೆ, ಅದು ನನ್ನ ಪ್ರಸ್ತುತ ಆದ್ಯತೆಯಾಗಿದೆ ಎಂದು ಅಕ್ಷಿತಾ ಹೇಳಿದ್ದಾರೆ.
ರಾಜ್ ಅಯ್ಯಪ್ಪ ಅವರೊಂದಿಗೆ ಜೋಡಿಯಾಗಿ ನಟಿಸುತ್ತಿದ್ದೇನೆ. ನನ್ನ ಪಾತ್ರ ಹೋಮ್ಲಿ ಗರ್ಲ್ ಆಗಿದ್ದು, ಚಿತ್ರವು ಕೊಡಗಿನ ರಮಣೀಯ ಸ್ಥಳಗಳ ಸುತ್ತಲೂ ಚಿತ್ರೀಕರಿಸಲ್ಪಟ್ಟಿದೆ. ತಮಿಳು ಮತ್ತು ತೆಲುಗು ಎರಡರಲ್ಲೂ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ತಮಿಳು ಅಷ್ಟೇ ಅಲ್ಲದೆ, ತೆಲುಗು ಪ್ರಾಜೆಕ್ಟ್‌ನಲ್ಲಿಯೂ ಕೆಲಸ ಮಾಡುತ್ತಿದ್ದೇನೆ. ಚಿತ್ರತಂಡ ಎಲ್ಲವನ್ನೂ ಅಂತಿಮಗೊಳಿಸಿದ ನಂತರ ಅಧಿಕೃತ ಮಾಹಿತಿ ನೀಡಲಾಗುವುದು ಎಂದರು.
ಕನ್ನಡ ಚಿತ್ರರಂಗವೇ ತನ್ನ ಪಾಲಿನ ಖಾಯಂ ನೆಲೆ ಅಂದುಕೊಂಡಿರುವ ಅಕ್ಷಿತಾ ಅವರು, ಈಗಾಗಲೇ ಕರ್ನಾಟಕದ ಅಳಿಯ, ಮಿಸ್ಟರ್ ಆಂಡ್ ಮಿಸೆಸ್ ಎಂಬೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆರಡೂ ಸಿನಿಮಾಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ.
ಹೀಗೆ ಪರಭಾಷಾ ನೆಲದಲ್ಲಿಯೂ ನೆಲೆ ಕಂಡುಕೊಂಡು, ಕನ್ನಡ ಚಿತ್ರರಂಗದಲ್ಲಿಯೂ ಮಿಂಚುವ ಲಕ್ಷಣಗಳನ್ನ ಹೊಂದಿರುವ ಅಕ್ಷಿತಾ ಕೊಡಗಿನವರು. ಬಿಎಸ್‍ಸಿ ಪದವೀಧರೆಯಾಗಿರೋ ಅಕ್ಷಿತಾ ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಕುಟುಂಬದಲ್ಲಿ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡಾ ಆರಂಭದಿಂದಲೇ ನಟಿಯಾಗೋ ಕನಸು ಸಾಕಿಕೊಂಡಿದ್ದವರು ಅಕ್ಷಿತಾ. ಪದವಿ ಮುಗಿಯುತ್ತಲೇ ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ ಬಂದಾಗ ಸೀದಾ ತನ್ನ ಕನಸಿನ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆಯೂರಿದ್ದ ಈಕೆ, ಸಾಯಿ ಕುಮಾರ್ ನಟಿಸಿದ್ದ ರಿಯಲ್ ಪೊಲೀಸ್ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಮೂಲಕ ಎಂಟ್ರಿ ಪಡೆದುಕೊಂಡಿದ್ದ ಅಕ್ಷಿತಾ ಆ ನಂತರದಲ್ಲಿ ಒಂದಷ್ಟು ಚಿತ್ರಗಳಲ್ಲಿ ಸಹನಟಿಯಾಗಿ ನಟಿಸಿ, ನಂತರ ನಾಯಕಿಯಾಗಿಯೂ ಹೊರಹೊಮ್ಮಿದ್ದರು.
ಧಾರಾವಾಹಿಗಳಿಂದ ವಿರಾಮ ತೆಗೆದುಕೊಂಡು ಚಿತ್ರ ನಟಿಯಾಗುವುದು ರಿಸ್ಕ್ ಎಂದೇ ಹೇಳಬಹುದು. ಏಕೆಂದರೆ, ಇಲ್ಲಿ ಮರಳಿ ಹೊಸ ಹೆಜ್ಜೆಯನ್ನು ಆರಂಭಿಸಬೇಕಾಗುತ್ತದೆ. ದೇವರ ದಯೆಯಿಂದ, ನನ್ನ ತಮಿಳು ಚೊಚ್ಚಲ ಚಿತ್ರಕ್ಕೆ ಉತ್ತಮ ಚಿತ್ರತಂಡ ಸಿಕ್ಕಿದೆ. ಮೇಲಾಗಿ ಕೊಡಗಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿರುವುದು ನನಗೆ ಹೆಮ್ಮೆಯ ವಿಷಯ. ಇನ್ನೂ ವಿವಿಧ ಭಾಷೆಗಳಲ್ಲಿ ಉತ್ತಮ ಸಿನಿಮಾದಲ್ಲಿ ಕೆಲಸ ಮಾಡುವ ಇಚ್ಛೆ ಇದೆ ಎಂದು ಅಕ್ಷಿತಾ ಹೇಳಿದ್ದಾರೆ.