ಟೈಟಲ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ನಟಿಸುತ್ತಿರುವ ಚೌಕಿದಾರ್ ಚಿತ್ರದ ಚಿತ್ರೀಕರಣ ಜುಲೈ ತಿಂಗಳಿನಲ್ಲಿ ಆರಂಭವಾಗಲಿದ್ದು, ಚಿತ್ರತಂಡ ತಾರಾಗಣ ಅಂತಿಮಗೊಳಿಸುವಲ್ಲಿ ಬಿಝಿಯಾಗಿದೆ.
ಈ ನಡುವೆ ಚಿತ್ರ ಕುರಿತು ಹೊಸ ಅಪ್ಡೇಟ್ ಸಿಕ್ಕಿದೆ. ರಂಗಿತರಂಗದಲ್ಲಿ ಗಮನಾರ್ಹ ಅಭಿನಯ ಸೇರಿದಂತೆ ಪ್ರಬಲ ಸಂಭಾಷಣೆ ಮತ್ತು ಪೊಲೀಸ್ ಪಾತ್ರಗಳಿಗೆ ಹೆಸರುವಾಸಿಯಾದ ಹಿರಿಯ ನಟ ಸಾಯಿಕುಮಾರ್ ಅವರು ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಕನ್ನಡದಲ್ಲಿ ‘ಆನೆ ಪಟಾಕಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ, ‘ರಥಾವರ’, ‘ತಾರಕಾಸುರ’ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ ಸಿನಿಮಾದ ಸೂತ್ರಧಾರರು.
ಈವರೆಗೆ ಸಿನಿಮಾದಲ್ಲಿ ರೋಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪೃಧ್ವಿ ಅಂಬಾರ್ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.
ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ.