ಲೈನ್‌ಮ್ಯಾನ್ ಪೋಸ್ಟರ್
ಲೈನ್‌ಮ್ಯಾನ್ ಪೋಸ್ಟರ್ 
ಸಿನಿಮಾ ಸುದ್ದಿ

ಮುಂಗಾರು ಮಳೆಯಿಂದ ಹಿಡಿದು ಇತ್ತೀಚಿನ ಹಿಟ್‌ಗಳವರೆಗೆ, ನಾನು ಕನ್ನಡ ಚಿತ್ರರಂಗದ ದೊಡ್ಡ ಅಭಿಮಾನಿ: ತ್ರಿಗುಣ್

Ramyashree GN

ರಘು ಶಾಸ್ತ್ರಿ ನಿರ್ದೇಶನದ 'ಲೈನ್‌ಮ್ಯಾನ್' ಚಿತ್ರ ಈ ವಾರ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ತಮಿಳಿನ ಡೆವಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ತ್ರಿಗುಣ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಪರ್ಪಲ್ ರಾಕ್ ಎಂಟರ್‌ಟೈನರ್ಸ್ ಸಂಸ್ಥೆ ನಿರ್ಮಿಸಿರುವ ಲೈನ್‌ಮ್ಯಾನ್ ಚಿತ್ರದಲ್ಲಿ ತ್ರಿಗುಣ್‌ಗೆ ಕಾಜಲ್ ಕುಂದರ್ ಜೋಡಿಯಾಗಿದ್ದಾರೆ. ಇನ್ನುಳಿದಂತೆ ನಿಶ್ವಿಕಾ, ಬಿ ಜಯಶ್ರೀ, ಹರಿಣಿ ಶ್ರೀಕಾಂತ್ ಮತ್ತು ಸುಜಯ್ ಶಾಸ್ತ್ರಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಶಾಂತಿ ಸಾಗರ್ ಎಚ್.ಜಿ ಅವರ ಜೊತೆಗೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಿದ್ದಾರೆ.

ಲೈನ್‌ಮ್ಯಾನ್ ಚಿತ್ರದ ಪ್ರಚಾರ ಕಾರ್ಯದ ನಿಮಿತ್ತ ಬೆಂಗಳೂರಿಗೆ ಬಂದಿರುವ ನಟ ತ್ರಿಗುಣ್, 'ಇಂದು, OTT ಪ್ಲಾಟ್‌ಫಾರ್ಮ್‌ಗಳು ಎಲ್ಲ ಅಡೆತಡೆಗಳನ್ನು ಮುರಿದು ಸಣ್ಣ ಸಿನಿಮಾಗಳನ್ನು ಕೂಡ ಇತರ ಎಲ್ಲ ಭಾಷೆಗಳ ಪ್ರೇಕ್ಷಕರನ್ನು ತಲುಪಲು ಅವಕಾಶ ಮಾಡಿಕೊಟ್ಟಿವೆ. ಇದು ಕಥೆ ಹೇಳುವ ಶಕ್ತಿಗೆ ಸಾಕ್ಷಿಯಾಗಿದೆ' ಎನ್ನುತ್ತಾರೆ.

ರಂಗಭೂಮಿ ಕಲಾವಿದರಾಗಿ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುವ ಅವರು, ಕರ್ನಾಟಕ ನಾಟಕ ಸಂಘಕ್ಕಾಗಿ ಮಾಡಿದ ತಮ್ಮ ಚೊಚ್ಚಲ ಕನ್ನಡ ನಾಟಕವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. 'ಕಾಲೇಜು ದಿನಗಳಿಂದಲೇ ಕನ್ನಡ ಚಿತ್ರರಂಗದೊಂದಿಗಿನ ನನ್ನ ಸಂಪರ್ಕವಿದೆ. ನಾನು ಚೆನ್ನೈನಲ್ಲಿ 100ನೇ ದಿನದಂದು ವೀಕ್ಷಿಸಿದ ಮುಂಗಾರು ಮಳೆಯಂತಹ ಸಿನಿಮಾದಿಂದ ಹಿಡಿದು ಪವನ್ ಕುಮಾರ್ ನಿರ್ದೇಶನದ ಲೂಸಿಯಾದಂತಹ ಸಿನಿಮಾಗಳವರೆಗೆ ನಾನು ಕನ್ನಡ ಚಿತ್ರರಂಗವನ್ನು ನಿಕಟವಾಗಿ ಅನುಸರಿಸಿದ್ದೇನೆ' ಎನ್ನುತ್ತಾರೆ.

'ನಾನು ರಿಮೇಕ್ ಮಾಡಲು ಯೋಚಿಸಿದೆ ಮತ್ತು ಅಂತಿಮವಾಗಿ ಲೈಫು ಇಷ್ಟೇನೆ ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಿದೆ. ಯು-ಟರ್ನ್ ಸಿನಿಮಾ ನೋಡಿ ನನಗೆ ಬಹಳ ಸಂತೋಷವಾಯಿತು. ಕಳೆದ ಕೆಲವು ವರ್ಷಗಳಿಂದ, ಕನ್ನಡ ಚಿತ್ರರಂಗವು ಕೆಜಿಎಫ್, ಕಾಂತಾರ, ಗರುಡ ಗಮನ ವೃಷಭ ವಾಹನ, 777 ಚಾರ್ಲಿ ಮತ್ತು ಇತ್ತೀಚಿನ ಸಪ್ತ ಸಾಗರದಾಚೆ ಎಲ್ಲೋ ಮುಂತಾದ ಗಮನಾರ್ಹ ಚಿತ್ರಗಳೊಂದಿಗೆ ಬೆಳವಣಿಗೆ ಕಂಡಿದೆ. ಕನ್ನಡ ಇಂಡಸ್ಟ್ರಿಯ ಭಾಗವಾಗುವುದು ನನಗೆ ಅನಿವಾರ್ಯ ಅನಿಸಿತು ಮತ್ತು ಒಳ್ಳೆಯ ಚಿತ್ರದೊಂದಿಗೆ ಪ್ರಾರಂಭಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದು ಅವರು ಹೇಳುತ್ತಾರೆ.

ನಿರ್ದೇಶಕ ರಘು ಶಾಸ್ತ್ರಿ ಅವರೊಂದಿಗಿನ ಕೆಲಸದ ಬಗ್ಗೆ ಮಾತನಾಡುವ ತ್ರಿಗುಣ್, ಆರಂಭದಲ್ಲಿ ಕನ್ನಡದಲ್ಲಿ ಲೈನ್‌ಮ್ಯಾನ್ ಸಿನಿಮಾ ತಯಾರಿಸಲು ಯೋಜಿಸಲಾಗಿತ್ತು. ನಂತರ ತೆಲುಗು ಯೋಜನೆಯಾಗಿಯೂ ರೂಪಿಸಲಾಯಿತು. ನಾವು ಭಾಷೆಗಳನ್ನು ಮೀರಿದ ಕಥೆಯನ್ನು ಕಂಡುಕೊಂಡಿದ್ದೇವೆ. ರಾಜ್ಯ ಸರ್ಕಾರದ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸ ಮಾಡುವ ಲೈನ್‌ಮ್ಯಾನ್‌ಗಳ ಕುರಿತಾದ ಚಿತ್ರ ಇದಾಗಿದ್ದು, ಇದು ಯಾವುದೇ ಭಾಷೆಯ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ' ಎಂದು ಅವರು ಹೇಳುತ್ತಾರೆ.

ಲೈನ್‌ಮ್ಯಾನ್ ಚಿತ್ರವಲ್ಲದೆ ತ್ರಿಗುಣ್ ಅವರು ಮಿಸ್ಕಿನ್ ಅವರಂತಹ ಮೆಚ್ಚುಗೆ ಪಡೆದ ನಿರ್ದೇಶಕರೊಂದಿಗೆ ಮುಂಬರುವ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಮಿಸ್ಟರ್ ವರ್ಕ್ ಫ್ರಮ್ ಹೋಮ್ ಎಂಬ ಮತ್ತೊಂದು ಆಸಕ್ತಿದಾಯಕ ತೆಲುಗು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 'ಕೋವಿಡ್ ನಂತರದ ಯುಗದಲ್ಲಿ, ಪ್ರೇಕ್ಷಕರು ತಾಜಾ ಕಥೆಗಳಿಗಾಗಿ ಹಂಬಲಿಸುತ್ತಿದ್ದಾರೆ ಮತ್ತು ಹೀಗಾಗಿ ಬಲಿಷ್ಠವಾದ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು ನಾನು ಗಮನಹರಿಸಿದ್ದೇನೆ' ಎನ್ನುತ್ತಾರೆ ಅವರು.

SCROLL FOR NEXT