ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದರ ನಡುವೆ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ‘A’ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
1998ರಲ್ಲಿ ರಿಲೀಸ್ ಆದ ‘A’ ಸಿನಿಮಾಗೆ ಅಂದು ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೂರು ಜನ ಹೀರೋಯಿನ್‌ಗಳ ಜೊತೆ ಉಪೇಂದ್ರ ಡ್ಯುಯೆಟ್ ಹಾಡಿದ್ದರು. ಉಪೇಂದ್ರ ಬರೆದ ಕಥೆಗೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
ಇದೀಗ ಇದೇ ಮೇ 17ಕ್ಕೆ ‘ಎ’ ಸಿನಿಮಾ ಮಾಡಲು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಯುಐ ಸಿನಿಮಾಗಾಗಿ ಕಾದು ಕುಳಿತವರಿಗೆ ‘A’ ಚಿತ್ರದ ಅಪ್‌ಡೇಟ್ ಸಿಕ್ಕಿದೆ. ಮತ್ತೆ ಉಪೇಂದ್ರ ಫಾರ್ಮುಲಾ ಮತ್ತೆ ವರ್ಕೌಟ್ ಆಗುತ್ತಾ? ಎಂದು ಕಾಯಬೇಕಿದೆ.
‘ಯುಐ’ ಸಿನಿಮಾ ವಿಎಫ್‌ಎಕ್ಸ್ ಕಾರಣದಿಂದಾಗಿ ವಿಳಂಬವಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ತಿಳಿಸಿದ್ದರು. 2022ರ ಜೂನ್‌ನಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಇದೇ ಜೂನ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಈ ನಡುವೆ ಮೇ 17ರಂದು ಬೆಂಗಳೂರಿನ ‘ಪ್ರಸನ್ನ’ ಥಿಯೇಟರ್ ಸೇರಿದಂತೆ ರಾಜ್ಯದಾದ್ಯಂತ ‘A’ ರಿರಿಲೀಸ್ ಆಗಲಿದೆ ಎಂದಿದ್ದಾರೆ ಉಪೇಂದ್ರ.
ವರ್ಷದ ಮೊದಲಾರ್ಧದಲ್ಲಿ ಇಲ್ಲಿಯವರೆಗೆ ಶಿವರಾಜ್‌ಕುಮಾರ್ ನಟನೆಯ ‘ಕರಟಕ ದಮನಕ’ ಹೊರತುಪಡಿಸಿ, ಸ್ಟಾರ್ ನಟರ ಸಿನಿಮಾಗಳೇ ಬಿಡುಗಡೆಯಾಗಿಲ್ಲ. ಕಳೆದ ಮಾರ್ಚ್ 15ರಂದು ಪುನೀತ್ ರಾಜ್‌ಕುಮಾರ್ ನಟನೆಯ ಹಿಟ್ ಸಿನಿಮಾ ‘ಜಾಕಿ’ ರಿರಿಲೀಸ್ ಆಗಿತ್ತು. ಇದಾದ ಬಳಿಕ ಕಳೆದ ಶುಕ್ರವಾರ(ಮೇ 10) ಪುನೀತ್ ನಟನೆಯ ‘ಪವರ್’ ಹಾಗೂ ‘ಅಂಜನಿಪುತ್ರ’ ರಿರಿಲೀಸ್ ಆದವು. ಬೆನ್ನಲ್ಲೇ ‘A’ ಸಿನಿಮಾವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ ಉಪೇಂದ್ರ.