ಮೈನೆ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಮತ್ತು ಅಭಿಮನ್ಯು ದಸ್ಸಾನಿ ಅವರ ತಂಗಿ ಅವಂತಿಕಾ ದಸ್ಸಾನಿ ನಾಗಶೇಖರ್ ನಿರ್ದೇಶನದ ಬಹುಭಾಷೆಯ ಚಿತ್ರದಲ್ಲಿ ಚೊಚ್ಚಲ ಬಾರಿಗೆ ನಟಿಸುತ್ತಿದ್ದಾರೆ. ಉಪೇಂದ್ರ ಅಣ್ಣನ ಮಗ ನಿರಂಜನ್ ಗೆ ನಾಯಕಿಯಾಗಿದ್ದಾರೆ.
'ಕ್ಯೂ' ಪ್ರಶ್ನೆ ಪತ್ರಿಕೆ ಸೋರಿಕೆಯ ನೈಜ ಘಟನೆಯನ್ನು ಆಧರಿಸಿದ್ದು, ಬಲವಾದ ಪ್ರೇಮಕಥೆಯೊಂದಿಗೆ ಹೆಣೆದುಕೊಂಡಿದೆ. ಇದನ್ನು ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಿಸಲಾಗುವುದು ಮತ್ತು ಇತರ ಭಾಷೆಗಳಲ್ಲಿ ಡಬ್ ಮಾಡುವ ಯೋಜನೆ ಇದೆ. ಈ ಚಿತ್ರವು ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆದ ನೈಜ ಘಟನೆಗಳು ಮತ್ತು ಪ್ರಣಯದ ವಿಶಿಷ್ಟ ಮಿಶ್ರಣವಾಗಿದೆ ಎಂದು ನಾಗಶೇಖರ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಐಶ್ವರ್ಯಾ ಜೊತೆಗಿನ ಅರ್ಜುನ್ ಸರ್ಜಾ ಅವರ ಚಿತ್ರದ ಶೂಟಿಂಗ್ ಮುಗಿಸಿದ ನಿರಂಜನ್, ಸದ್ಯ ಕ್ಯೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನವೆಂಬರ್ 11 ರಂದು ಚಿತ್ರೀಕರಣ ಪ್ರಾರಂಭಿಸಲು ತಂಡ ಸಜ್ಜಾಗಿದೆ. ಇದು ನಾಗಶೇಖರ್ ಅವರ ಹುಟ್ಟುಹಬ್ಬದ ಜೊತೆಗೆ ವಿಶೇಷ ಮಹತ್ವವನ್ನು ಹೊಂದಿದೆ. ನನ್ನ ಹುಟ್ಟುಹಬ್ಬದಂದು ಚಿತ್ರೀಕರಣವನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ, ಅದು ಅಧಿಕೃತ ಮುಹೂರ್ತವೂ ಆಗಿರುತ್ತದೆ" ಎಂದು ತಿಳಿಸಿದ್ದಾರೆ.
ಕ್ಯೂ ಮೂಲಕ ಸಂಗೀತ ನಿರ್ದೇಶಕರಾದ ನಾಗಶೇಖರ್: ಕುತೂಹಲಕಾರಿ ವಿಷಯವೆಂದರೆ ಕ್ಯೂ ಚಿತ್ರದ ಮೂಲಕ ನಾಗಶೇಖರ್ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಸಂಜು ವೆಡ್ಸ್ ಗೀತಾ, ಮೈನಾದಂತಹ ಚಿತ್ರಗಳಿಗೆ ನೆನಪಿನಲ್ಲಿ ಉಳಿಯುವಂತಹ ಸಾಂಗ್ ನೀಡುವ ಮೂಲಕ ಹೆಸರುವಾಸಿಯಾಗಿರುವ ನಾಗಶೇಖರ್ ಕ್ಯೂ ಮೂಲಕ ಹೊಸ ಹೆಜ್ಜೆ ಇಡುತ್ತಿರುವುದಕ್ಕೆ ಥ್ರೀಲ್ ಆಗಿದ್ದಾರೆ.
ವಿವಿಧ ಭಾಷೆಗಳಲ್ಲಿ ಐದು ವಿವಿಧ ಸಾಹಿತಿಗಳು ಬರೆದಿರುವ ಐದು ಸಾಂಗ್ ಗಳು ಚಿತ್ರದಲ್ಲಿವೆ. ನನ್ನ ಚಿತ್ರಗಳಲ್ಲಿನ ಸಂಗೀತದಲ್ಲಿ ಯಾವಾಗಲೂ ಆಳವಾಗಿ ತೊಡಗಿಸಿಕೊಳ್ಳುತ್ತಿದ್ದೆ. ಈಗ ನಾನೇ ಸಂಗೀತ ಸಂಯೋಜನೆ ಮಾಡುತ್ತಿರುವುದರಿಂದ ತುಂಬಾ ಎಕ್ಸೈಟ್ ಆಗಿರುವುದಾಗಿ ನಾಗಶೇಖರ್ ತಿಳಿಸಿದರು.
ಸಂಗೀತ ನಿರ್ದೇಶನದ ಜೊತೆಗೆ ನಾಗಶೇಖರ್ ಅವರೇ ತಮ್ಮ ಬ್ಯಾನರ್ ನಲ್ಲಿ ಕ್ಯೂ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಾರಿಷಸ್ ಮತ್ತು ನೆದರ್ ಲ್ಯಾಂಡ್ ನಲ್ಲಿ ಚಿತ್ರದ ಚಿತ್ರೀಕರಣ ನಡೆಯುವುದನ್ನು ಅವರು ಖಚಿತಪಡಿಸಿದ್ದಾರೆ. ಈ ಮಧ್ಯೆ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಸಂಜು ವೇಡ್ಸ್ ಗೀತಾ 2 ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆ ದಿನಾಂಕ ಸದ್ಯದಲ್ಲಿ ಘೋಷಣೆಯಾಗಲಿದೆ.