ಕನ್ನಡ ಚಿತ್ರರಂಗವು LOVE YOU ಮೂಲಕ ಜಾಗತಿಕ ಚಲನಚಿತ್ರೋದ್ಯಮದಲ್ಲಿ AI ಕ್ರಾಂತಿ ಮಾಡಲು ಸಜ್ಜಾಗಿದ್ದು, ಕೃತಕ ಬುದ್ಧಿಮತ್ತೆಯ ಬಳಕೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಕನ್ನಡದ 'ಲವ್ ಯು' ಸಿನಿಮಾ ವಿಶ್ವದ ಮೊದಲ ಸಂಪೂರ್ಣವಾಗಿ AI-ಆಧಾರಿತ ಸಿನಿಮಾ ಆಗಿದ್ದು, ಎಸ್ ನರಸಿಂಹಮೂರ್ತಿ ಅವರು ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಅವರೇ ಹೇಳಿದಂತೆ, ಇದು "ಒಂದು ಡಿಜಿಟಲ್ ಅದ್ಭುತ".
ನಿರ್ದೇಶಕ, ನಿರ್ಮಾಪಕ, AI ಇನ್‌ಸ್ಟ್ರಕ್ಟರ್ ಹಾಗೂ ಪಿಆರ್‌ಓ ಬಿಟ್ಟು ಬೇರೆ ಯಾರೂ ನಿಜವಾದ ವ್ಯಕ್ತಿಗಳು ಈ ಚಿತ್ರಕ್ಕೆ ಕೆಲಸ ಮಾಡಿಲ್ಲ. ಎಲ್ಲಾ AIಮಯ. ಸಂಗೀತ, ಹಾಡುಗಳು, ಲೋಕೇಶನ್ಸ್ ಕೂಡ AIನಲ್ಲೇ ಮಾಡಲಾಗಿದೆ. 95 ನಿಮಿಷಗಳ ಈ ಸಿನಿಮಾ ಸೆನ್ಸಾರ್ ಮುಗಿಸಿ ಇದೀಗ ಬಿಡುಗಡೆಗೆ ಸಜ್ಜಾಗಿದೆ.
"ಪ್ರತಿಯೊಂದು ಫ್ರೇಮ್, ಹಾಡು, ಸಂಭಾಷಣೆ, ಪಾತ್ರದ ಅನಿಮೇಷನ್, ಲಿಪ್-ಸಿಂಕ್ ಮತ್ತು ಕ್ಯಾಮೆರಾ ಚಲನೆಯನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯಿಂದ ನಿರ್ಮಿಸಲಾಗಿದೆ." ಕೋಡ್ ಮತ್ತು ಸೃಜನಶೀಲತೆಯ ಹಿಂದೆ AI ಎಂಜಿನಿಯರ್ ನೂತನ್ ಇದ್ದಾರೆ. ಸುಂದರ್ ರಾಜ್ ಗುಂಡೂರಾವ್ ಅವರು ಇಡೀ ಪ್ರಾಜೆಕ್ಟ್‌ನ ನೇತೃತ್ವ ವಹಿಸಿದ್ದಾರೆ. ಇಡೀ ತಂಡ ಕ್ರಿಯೇಟಿವ್ ಆಗಿ ಕೆಲಸ ಮಾಡಿದೆ" ಎಂದು 'ಲವ್ ಯು' ಸಿನಿಮಾದ ನಿರ್ದೇಶಕ ನರಸಿಂಹಮೂರ್ತಿ ಹೇಳಿದ್ದಾರೆ.
95 ನಿಮಿಷಗಳ 'ಲವ್‌ಯು' ಚಿತ್ರದಲ್ಲಿ ಒಟ್ಟು 12 ಹಾಡುಗಳಿವೆ. ಆ ಹಾಡುಗಳನ್ನು ಕೂಡ AIನಲ್ಲೇ ಕಂಪೋಸ್ ಮಾಡಿ ರೆಕಾರ್ಡಿಂಗ್ ಮಾಡಿದ್ದಾರೆ. ಇದು ಬರೀ ಒಂದು ಸಿನಿಮಾ ಅಲ್ಲ, ಒಂದು ಕ್ರಾಂತಿ ಆಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಲವ್ ಯು ಚಿತ್ರ CBFC ಪ್ರಮಾಣಪತ್ರ (U/A) ಪಡೆದ ಮೊದಲ AI ಚಿತ್ರವಾಗಿದ್ದು, ಅಧಿಕೃತವಾಗಿ ಇದು ಥಿಯೇಟ್ರಿಕಲ್ ಬಿಡುಗಡೆಗೆ ಅರ್ಹತೆ ಪಡೆದಿದೆ. ಸಂಪೂರ್ಣ AI ನಿಂದ ನಿರ್ಮಿಸಲ್ಪಟ್ಟ ಲವ್ ಯು ಸಿನಿಮಾ ಮುಂಬರುವ ತಿಂಗಳುಗಳಲ್ಲಿ ಜಾಗತಿಕ ಥಿಯೇಟ್ರಿಕಲ್ ಬಿಡುಗಡೆಗೆ ಸಜ್ಜಾಗುತ್ತಿದೆ. ಶೀಘ್ರದಲ್ಲೇ ಅಧಿಕೃತವಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.