ಬೆಂಗಳೂರು: ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚನೆ ಮಾಡಿರುವ ಆರೋಪದಡಿ ನಟ ಧೃವ ಸರ್ಜಾ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಘವೇಂದ್ರ ಹೆಗ್ಗಡೆ ಎಂಬುವವರು ಧೃವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ. 3 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದ್ದು, ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ.
2016ರಲ್ಲಿ ನನ್ನ ಮೊದಲ ಸಿನಿಮಾ (ಜಗ್ಗು ದಾದ) ಯಶಸ್ಸು ಕಂಡಿತು. ಈ ವೇಳೆ ಧ್ರುವ ಸರ್ಜಾ ಅವರು ನನ್ನ ಕಚೇರಿಗೆ ಬಂದು ಸಿನಿಮಾ ಮಾಡುವ ಆಸಕ್ತಿ ತೋರಿಸಿದರು. 2016ರಿಂದ 2018ರವರೆಗೆ ಅವರು ಈ ವಿಚಾರದಲ್ಲಿ ತುಂಬಾನೇ ಆಸಕ್ತಿ ತೋರಿಸುತ್ತಿದ್ದರು. ದಿ ಸೋಲ್ಜರ್ ಹೆಸರಿನ ಸಿನಿಮಾದ ಸ್ಕ್ರಿಪ್ಟ್ ಕೂಡ ನೀಡಿದರು ಎಂದು ರಾಘವೇಂದ್ರ ಹೆಗ್ಡೆ ಅಂಬೋಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಿನಿಮಾ ಕಾಂಟ್ರ್ಯಾಕ್ಟ್ ಸಹಿ ಮಾಡುವುದಕ್ಕೂ ಮೊದಲು 3 ಕೋಟಿ ರೂಪಾಯಿ ಕೊಡುವಂತೆ ಧ್ರುವ ಕೇಳಿದ್ದರು. ಇದರಿಂದ ಫ್ಲ್ಯಾಟ್ ಖರೀದಿಸೋದಾಗಿ ಹೇಳಿದ್ದರು. ಮೇಲೆ ತಿಳಿಸಿದ ಸಿನಿಮಾದ ಕೆಲಸವನ್ನು ಶೀಘ್ರವೇ ಆರಂಭಿಸೋದಾಗಿ ತಿಳಿಸಿದ್ದರು ಎಂಬುದಾಗಿ ಹೆಗ್ಡೆ ದೂರಿದ್ದಾರೆ.
ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ಹಣವನ್ನು ಹೊಂದಿಸಿ ಧ್ರುವಗೆ 3.15 ಕೋಟಿ ರೂಪಾಯಿ ಹಣ ನೀಡಿದ್ದರು. 2019ರಲ್ಲಿ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಿನಿಮಾದ ಶೂಟ್ ಜನವರಿ 2020ರಲ್ಲಿ ಪ್ರಾರಂಭವಾಗಿ ಜೂನ್ 2020ರೊಳಗೆ ಪೂರ್ಣಗೊಳ್ಳಬೇಕಿತ್ತು.
ಹಣವನ್ನು ಪಡೆದ ನಂತರ ಧ್ರುವ ಅವರು ಅವಧಿ ವಿಸ್ತರಣಗೆ ಕೋರಿದರಂತೆ. ನಂತರ ಕೊವಿಡ್ ಬಂತು. ಕೊವಿಡ್ ಲಾಕ್ಡೌನ್ ಪೂರ್ಣಗೊಂಡರೂ, ಅವರು ಪ್ರತಿಕ್ರಿಯಿಸಲಿಲ್ಲ ಎಂದು ರಾಘವೇಂದ್ರ ಆರೋಪಿಸಿದ್ದಾರೆ.