ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ವಿವಾದಕ್ಕೆ ಒಂದು ತಾರ್ಕಿಕ ಆಂತ್ಯ ಸಿಗುವ ಕಾಲ ಸನಿಹಿತವಾಗಿದೆ.
ನಟ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅರ್ಧ ಎಕ್ರೆ ಜಾಗ ಖರೀದಿಸಿದ್ದು, ವಿಷ್ಣುವರ್ಧನ್ ಜನ್ಮದಿನವಾದ ಸೆ. 18ರಂದು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಪೂಜೆ ನೆರವೇರಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಖರೀದಿಸಿರುವ ಈ ಜಾಗದಲ್ಲಿ ಗ್ರಂಥಾಲಯ, ವಿಷ್ಣು ಅವರ 25 ಅಡಿಯ ಪುತ್ಥಳಿ ಹಾಗೂ ಒಂದು ಗ್ಯಾಲರಿ ನಿರ್ಮಾಣವಾಗಲಿದೆ. ಡಾ ವಿಷ್ಣುವರ್ಧನ್ ಸಮಾಧಿ ತೆರವುಗೊಳಿಸಿದ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆ, ಪ್ರತಿಭಟನೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ನಟ ಬಾಲಣ್ಣ ಕುಟುಂಬದ ಒಡೆತನದಲ್ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಕನ್ನಡ ನಟ-ನಟಿಯರು ಬೇಸರ ಹೊರಹಾಕಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಸೆ. 2ರಂದು ಸುದೀಪ್ ಅವರ ಹುಟ್ಟುಹಬ್ಬ. ಅವರು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಸುದೀಪ್ ಅವರ ಹುಟ್ಟುಹಬ್ಬದಂದೇ ಸ್ಮಾರಕದ ನೀಲಿನಕ್ಷೆಯನ್ನು ಸ್ವತಃ ಸುದೀಪ್ ಅನಾವರಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸೆ.18ರಂದು ವಿಷ್ಣುವರ್ಧನ್ ಬರ್ತ್‌ಡೇ ದಿನವೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು. ಕೆಂಗೇರಿ ಬಳಿ ನಿರ್ಮಾಣ ಆಗುವ ಸ್ಮಾರಕ, ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಎಂದು ತಿಳಿಸಿದ್ದಾರೆ.ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಅಂಗವಾಗಿ ಒಂದು ದಿನ ಕಾರ್ಯಕ್ರಮ ಮಾಡಲು ಯೋಜಿಸಲಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಈ ಸಂಭ್ರಮ ಮಾಡಲಾಗುತ್ತಿದೆ. ಇಡೀ ಚಿತ್ರರಂಗ ಭಾಗಿ ಆಗಲಿದೆ ಎಂದು ತಿಳಿಸಿದರು.