ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ 'ಓಂ' ಸಿನಿಮಾದ ಡಾನ್ 'ರಾಯ್ ಹಾಗೂ 'ಕೆಜಿಎಫ್ ನ ಚಾಚಾ' ಎಂದೇ ಖ್ಯಾತರಾದ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಗುರುತೇ ಸಿಗಲಾರದಷ್ಟು ಬದಲಾಗಿದ್ದಾರೆ.
ಕ್ಯಾನ್ಸರ್ ಹೊಟ್ಟೆಗೆ ಪಸರಿಸಿ ಸಾವು-ಬದುಕಿನ ನಡುವೆ ಹೋರಾಡುವಂತಾಗಿದೆ. ದೇಹದ ತೂಕ ಕಡಿಮೆಯಾಗಿದ್ದು, ತೆಳಗಾಗಿದ್ದಾರೆ. ಆದರೆ ಹೊಟ್ಟೆಯಲ್ಲಿ ನೀರು ತುಂಬಿ ಊದಿಕೊಂಡಿದೆ.
ಒಂದು ಕಾಲದಲ್ಲಿ ಖಡಕ್ ವಿಲನ್ ಆಗಿ ತೆರೆ ಮೇಲೆ ಮಿಂಚಿದ್ದ ನಟನನ್ನು ಈ ಸ್ಥಿತಿಯಲ್ಲಿ ನೋಡಿ ಅಭಿಮಾನಿಗಳು ಮರುಕುಪಡುತ್ತಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗೋಪಿ ಗೌಡ್ರು ಎಂಬುವರು ಹರೀಶ್ ರಾಯ್ ಅವರನ್ನು ಭೇಟಿಯಾಗಿದ್ದು, ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಿಕಿತ್ಸೆಗೆ ಆರ್ಥಿಕ ನೆರವು ಯಾಚಿಸಿರುವ ಹರೀಶ್ ರಾಯ್, ಗುಣವಾದರೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.
ಹರೀಶ್ ರಾಯ್ ಓಂ, ಸಮರ, ಬೆಂಗಳೂರು ಅಂಡರ್ ವರ್ಲ್ಡ್, ಜೋಡಿಹಕ್ಕಿ,ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ನಲ್ಲ, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.