ದೊಡ್ಡ ಬಜೆಟ್ ಸಿನಿಮಾಗಳ ಆಕರ್ಷಣೆಯ ಜೊತೆಗೆ ಜಾಣ್ಮೆಯಿಂದ ನಿರೂಪಿಸಿದ ನವಿರು ಕಥೆಗಳ ಸಿನಿಮಾಗಳು ಈ ವರ್ಷ ನಿರೀಕ್ಷೆ ಮೀರಿ ಯಶಸ್ಸಿನ ಗಡಿ ದಾಟಿದೆ, ಇದರ ಜೊತೆಗ ಸಿನಿಮಾ ಹಾಗೂ ಸಿನಿ ತಾರೆಗಳ ಬೆನ್ನ ಹಿಂದೆಯೇ ವಿವಾದಗಳು ಬಂದಿವೆ.
ಎಲ್ಲಿ ಮನರಂಜನೆ ಇದೆಯೋ ಅಲ್ಲಿ ವಿವಾದಗಳು ಇರಲೇಬೇಕು. ಸಿನಿಮಾಗಳು, ಸಿನಿ ತಾರೆಗಳು ವಿವಾದದ ಬಾಯಿಗೆ ಸಿಕ್ಕು ಬಳಲುವುದು ಸಾಮಾನ್ಯ. 2025ನೇ ವರ್ಷ ಭಾರತೀಯ ಚಿತ್ರರಂಗಕ್ಕೆ ಕೇವಲ ಸಿನಿ ವರ್ಷವಾಗಿರದೆ, ವಿವಾದ, ಪ್ರತಿಭಟನೆ, ಕಾನೂನು ಸಮಸ್ಯೆಗಳು ಹಾಗೂ ಸಾಮಾಜಿಕ ಚರ್ಚೆಗಳ ಕೇಂದ್ರಬಿಂದುವಾಗಿಯೂ ಪರಿಣಮಿಸಿತು. ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ನ ಹಲವು ಪ್ರಮುಖ ವ್ಯಕ್ತಿತ್ವಗಳು ಒಂದಾದ ಮೇಲೆ ಒಂದರಂತೆ ವಿವಾದಕ್ಕೆ ಸಿಲುಕಿದ್ದರು. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಕಂಡು ಬಂದ ಪ್ರಮುಖ ವಿವಾದಗಳ ಕುರಿತ ಮಾಹಿತಿ ಇಲ್ಲಿದೆ...
ಈ ವರ್ಷ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾ ಭಾರಿ ವಿವಾದ ಸೃಷ್ಟಿಸಿತ್ತು. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರ ಹತ್ಯೆಯನ್ನು ಚಿತ್ರಿಸಿರುವುದು ನಿಷೇಧಕ್ಕೆ ಕಾರಣ ಎನ್ನಲಾಗಿತ್ತು, ಬಾಂಗ್ಲಾದೇಶ ಸರ್ಕಾರ ಚಿತ್ರ ಪ್ರದರ್ಶನಕ್ಕೆ ನಿಷೇಧ ವಿಧಿಸಿತ್ತು. ಇದಲ್ಲದೆ, ಭಾರತದಲ್ಲೂ ಹಲವು ಕಡೆ ಪ್ರತಿಭಟನೆಗಳು ನಡೆದವು.
ಈ ವರ್ಷದ ಏಪ್ರಿಲ್‌ನಲ್ಲಿ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ಕಲಾವಿದರ ಮೇಲೆ ಮತ್ತೊಮ್ಮೆ ನಿಷೇಧ ಹೇರಲಾಯಿತು. ಫವಾದ್ ಖಾನ್ ನಾಯಕನಾಗಿ ನಟಿಸಿದ ಭಾರತೀಯ ಚಿತ್ರ ಬಿಡುಗಡೆಯಾಗುವ ವಾರಗಳ ಮೊದಲು ಈ ನಿಷೇದ ಹೇರಲಾಗಿತ್ತು. ಅದೇ ರೀತಿ, ಪಾಕಿಸ್ತಾನಿ ನಟಿ ಹಾನಿಯಾ ಆಮಿರ್ ಅಭಿನಯಿಸಿದ್ದ ಕಾರಣ ದಿಲ್ಜಿತ್ ದೋಸಾಂಜ್ ಅವರ ಪಂಜಾಬಿ ಚಿತ್ರ ಸರ್ದಾರ್ 3 ಕೂಡ ಸಂಕಷ್ಟಕ್ಕೆ ಸಿಲುಕಿತ್ತು.
ಸಿನಿಮಾ ಸಮರ್ಥಿಸಿಕೊಳ್ಳುವಾಗ ಮತ್ತು ಆನ್‌ಲೈನ್‌ನಲ್ಲಿ ಜಾತಿವಾದವನ್ನು ಟೀಕಿಸುವಾಗ ಅನುರಾಗ್ ಕಶ್ಯಪ್ ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು, ಈ ಹೇಳಿಕೆ ಭಾರೀ ಆಕ್ರೋಕ್ಕೆ ಕಾರಣವಾಗಿತ್ತು. ಹೇಳಿಕೆ ಸಂಬಂಧ ಜೈಪುರ ಮತ್ತು ರಾಯಪುರದಲ್ಲಿ ಎಫ್ಐಆರ್ ಕೂಡ ದಾಖಲಾಗಿವೆ. ಈ ಬೆಳವಣಿಗೆ ಬೆನ್ನಲ್ಲೇ ಅನುರಾಗ್ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಬೆದರಿಕೆ ಕರೆ ಬರುತ್ತಿರುವುದಾಗಿ ಆರೋಪಿಸಿದ್ದರು.
2025ರ ಮೇ ತಿಂಗಳಲ್ಲಿ ನಟ ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ಭಾವುಕರಾಗಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಚಿತ್ರರಂಗವನ್ನು ‘ಅಸಭ್ಯ’ ಎಂದು ಟೀಕಿಸಿದ್ದ ಅವರು, ಕೆಲವು ನಟರು ಹಾಗೂ ಸಂಗೀತಕಾರರ ಹೆಸರನ್ನೂ ಉಲ್ಲೇಖಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ನಿವಾಸಕ್ಕೆ ನುಗ್ಗಿದ್ದ ಕಳ್ಳನೊಬ್ಬ, ದೈಹಿಕ ಹಲ್ಲೆ ನಡೆಸಿ ಆತಂಕ ಮೂಡಿಸಿದ್ದ. ಈ ದಾಳಿಯಲ್ಲಿ ಸೈಫ್ ಗಂಭೀರವಾಗಿ ಗಾಯಗೊಂಡು ಕೆಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು.
ಸ್ಪಿರಿಟ್ ಮತ್ತು ಕಲ್ಕಿ 2898 ಎಡಿ ದೊಡ್ಡ ಬಜೆಟ್ ಸಿನಿಮಾಗಳಾಗಿದ್ದು, ಈ ಸಿನಿಮಾಗಳಿಂದ ದೀಪಿಕಾ ಪಡುಕೋಣೆ ಹೊರಬಂದದ್ದು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಮೇ 24, 2025 ರಂದು ಚೆನ್ನೈನಲ್ಲಿ ನಡೆದ ತಮ್ಮ 'ಥಗ್ ಲೈಫ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಮಲ್ ಹಾಸನ್ ನೀಡಿದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರು ಮತ್ತು ಕನ್ನಡ ನಟ ಶಿವರಾಜ್‌ಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಕಮಲ್ ಹಾಸನ್ ಅವರು, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.
ಐಎಫ್‌ಎಫ್‌ಐ 2025 ಕಾರ್ಯಕ್ರಮದಲ್ಲಿ ನಟ ರಣವೀರ್ ಸಿಂಗ್, ಕಾಂತಾರ ಚಿತ್ರದ ದೈವ ಪಾತ್ರವನ್ನು ಅನುಕರಿಸಿದ್ದು, ವಿವಾದ ಸೃಷ್ಟಿಸಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ದೂರ ಕೂಡ ದಾಖಲಾಗಿತ್ತು. ವಿರೋಧ ಬೆನ್ನಲ್ಲೇ ರಣವೀರ್ ಸಿಂಗ್ ಅವರು ಕ್ಷಮೆಯಾಚಿಸಿದ್ದರು.
ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು, ಆರ್ಯನ್ ಖಾನ್ ನಿರ್ದೇಶನದ ನೆಟ್‌ಫ್ಲಿಕ್ಸ್ ಸರಣಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಮ್ಮ ವ್ಯಕ್ತಿತ್ವವನ್ನು ಹೋಲುವ ಪಾತ್ರವನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ಡ್ರಗ್ರ್ ಪ್ರಕರಣವೊಂದರಲ್ಲಿ ಜೂನ್ ತಿಂಗಳಿನಲ್ಲಿ ತಮಿಳು ನಟ ಶ್ರೀಕಾಂತ್ ಅವರು ಬಂಧನಕ್ಕೊಳಗಾಗಿದ್ದರು. ಮಾಜಿ ಎಐಎಡಿಎಂಕೆ ಸದಸ್ಯ ಪ್ರಸಾದ್ ಅವರ ತನಿಖೆ ಬಳಿಕ ಮಾದಕ ವಸ್ತುವಿನ ದೊಡ್ಡ ಜಾಲವೇ ಬಹಿರಂಗಗೊಂಡಿತ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ್ದ ಊರ್ವಶಿ ಅವರು, ಅಭಿಮಾನಿಗಳು ತಮಗಾಗಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಉತ್ತರಾಖಂಡ್ನಲ್ಲಿ ನನ್ನ ಹೆಸರಿನಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ನನ್ನ ಮೂರ್ತಿಯನ್ನು ದೇವರಾಗಿ ಇರಿಸಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ, ಪ್ರತಿದಿನ ಸಾವಿರಾರು ಮಂದಿ ಭಕ್ತಾದಿಗಳು ಅಲ್ಲಿಗೆ ಭೇಟಿ ನೀಡುತ್ತಾರೆ, ನನ್ನ ಮೂರ್ತಿಗೆ ಮಾಲೆ ಹಾಕಿ ಪೂಜೆ ಮಾಡುತ್ತಾರೆ ಎಂದೆಲ್ಲ ಹೇಳಿಕೊಂಡಿದ್ದರು.
ಅಸಲಿಗೆ ಉತ್ತರಾಖಂಡ್ ನಲ್ಲಿ ಬದ್ರಿನಾಥ ಧಾಮದ ಬಳಿ ಊರ್ವಶಿ ದೇವಾಲಯ ಇದೆ ಆದರೆ ಅದು ಮಾತೆ ಊರ್ವಶಿಯ ದೇವಾಲಯ. ಆ ದೇವಾಲಯಕ್ಕೆ ಸಾವಿರಾರು ವರ್ಷಗಳ ಐತಿಹ್ಯ ಇದೆ. ದೇವರ ದೇವಾಲಯವನ್ನು ತನ್ನ ದೇವಾಲಯ ಎಂದು ಊರ್ವಶಿ ರೌಟೆಲಾ ನೀಡಿದ್ದ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದ ಬಳಿಕ ಊರ್ವಶಿ ಅವರು ಕ್ಷಮೆಯಾಚಿಸಿದ್ದರು.
ಒಟ್ಟಾರೆ 2025ರ ಈ ಎಲ್ಲಾ ಘಟನೆಗಳು ಚಿತ್ರರಂಗವು ಕೇವಲ ಮನರಂಜನೆಯ ಲೋಕವಲ್ಲ, ಅದು ಸಮಾಜ, ರಾಜಕೀಯ, ಸಂಸ್ಕೃತಿ ಮತ್ತು ಜನಾಭಿಪ್ರಾಯಗಳ ಪ್ರತಿಬಿಂಬ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ವಿವಾದಗಳು ತಾತ್ಕಾಲಿಕವಾಗಿರಬಹುದು, ಆದರೆ, ಅವು ಎಬ್ಬಿಸುವ ಚರ್ಚೆಗಳು ದೀರ್ಘಕಾಲದ ಪರಿಣಾಮ ಬೀರುತ್ತವೆ.