ಗಾಯಕಿ ಶ್ರೇಯಾ ಘೋಷಾಲ್ ಇದೀಗ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮುಂಬರುವ ಚಿತ್ರದ ರೊಮ್ಯಾಂಟಿಕ್ ಟ್ರ್ಯಾಕ್‌ಗೆ ತಮ್ಮ ಧ್ವನಿ ನೀಡಿದ್ದಾರೆ. ಕವಿರಾಜ್ ಸಾಹಿತ್ಯ ಬರೆದಿರುವ ಪಳನಿ ಡಿ ಸೇನಾಪತಿ ಅವರ ಸಂಗೀತ ಸಂಯೋಜನೆಯಿರುವ 'ಒಂದೇ ಮಾತಲ್ಲಿ ಹೇಳಲಾರೆ' ಎಂಬ ಶೀರ್ಷಿಕೆಯ ಗೀತೆಯನ್ನು ಶ್ರೇಯಾ ಹಾಡಿದ್ದು, ಸೋನು ನಿಗಮ್ ಕೂಡ ಈ ಹಾಡಿಗೆ ಧ್ವನಿ ನೀಡಿದ್ದಾರೆ.
ಇತ್ತೀಚಿಗೆ ಶ್ರೇಯಾ ಘೋಷಾಲ್ ಅವರು ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಅನೇಕ ಸಂಗೀತ ನಿರ್ದೇಶಕರು ಅವರನ್ನು ಮರಳಿ ಕರೆತರಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೆ, ಈ ಚಿತ್ರದ ಹಾಡಿಗೆ ಧ್ವನಿ ನೀಡಿದ್ದು, ಅವರ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಸದ್ದಿಲ್ಲದೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಇದೀಗ ಅಂತಿಮ ಹಂತ ತಲುಪಿದೆ. ಎಸ್ಎಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಚ್ಎಸ್ ನಾಗಶ್ರೀ ನಿರ್ಮಿಸಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಎಸ್ ಸುಪ್ರಿತ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ.
ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಬಂಧದೊಂದಿಗೆ ಪ್ರೇಮಕಥೆಯನ್ನು ಸಂಯೋಜಿಸುವ ವಿಶಿಷ್ಟ ಪರಿಕಲ್ಪನೆಯೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರವು ಈಗಾಗಲೇ ಕಾಶ್ಮೀರ, ರಾಜಸ್ಥಾನ, ಅಂಡಮಾನ್ ದ್ವೀಪಗಳು, ಮಂಗಳೂರು, ಚಿಕ್ಕಮಗಳೂರು, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ 70 ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಚಿತ್ರದ ಅಂತಿಮ ಭಾಗಗಳನ್ನು ಇನ್ನೂ 15 ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಿಸಲು ಚಿತ್ರತಂಡ ಈಗ ಸಿದ್ಧತೆ ನಡೆಸಿದ್ದು, ಚಿತ್ರದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರಕ್ಕೆ ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಸೋನು ನಿಗಮ್, ಕುನಾಲ್ ಗಾಂಜಾವಾಲಾ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಪಾಲಕ್ ಮುಚ್ಚಲ್ ಅವರಂತಹ ಇತರ ಪ್ರಸಿದ್ಧ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ವಿಜಯ್ ಸೂರ್ಯ ಮತ್ತು ಶಂಕರ್ ಅಶ್ವತ್ಥ್ ಸೇರಿದಂತೆ ಇತರರು ನಟಿಸಿದ್ದಾರೆ.