ತೆಲುಗಿನ ನಟ ವಿಷ್ಣು ಮಂಚು ನಟನೆಯ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಕಣ್ಣಪ್ಪದ 'ಶಿವ ಶಿವ ಶಂಕರ' ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಚಿತ್ರವನ್ನು ನಟ ಮೋಹನ್ ಬಾಬು ನಿರ್ಮಿಸಿದ್ದಾರೆ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ. ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಶಿವ ಶಿವ ಶಂಕರ ಹಾಡನ್ನು ಅನಾವರಣಗೊಳಿಸಿ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮೋಹನ್ ಬಾಬು, ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಮತ್ತು ಚಿತ್ರತಂಡ ಭಾಗವಹಿಸಿತ್ತು. ಇನ್ನು ವಿಶೇಷ ಅತಿಥಿಗಳಾಗಿ ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಭಾಗವಹಿಸಿದ್ದರು.
ಈ ವೇಳೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ನಟ ಮತ್ತು ನಿರ್ಮಾಪಕ ಮೋಹನ್ ಬಾಬು, ನಾನು ಕಣ್ಣಪ್ಪನ ಬಗ್ಗೆ ಯೋಚಿಸಿದಾಗ, ನನಗೆ ಡಾ. ರಾಜ್‌ಕುಮಾರ್ ನೆನಪಾಗುತ್ತಾರೆ. ಇಂದು, ಶ್ರೀ ರವಿಶಂಕರ್ ಗುರೂಜಿ ನನ್ನ ಮಗ ವಿಷ್ಣು ಮಂಚು ಅವರ ಚಿತ್ರದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಆಶೀರ್ವದಿಸಿದ್ದಾರೆ. ನನ್ನ ಆತ್ಮೀಯ ಗೆಳೆಯರಾದ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಪತ್ನಿಯರಾದ ಭಾರತಿ ವಿಷ್ಣುವರ್ಧನ್ ಮತ್ತು ಸುಮಲತಾ ಅಂಬರೀಶ್ ನಮ್ಮೊಂದಿಗೆ ಇರುವುದು ಗೌರವ. ರಾಕ್‌ಲೈನ್ ವೆಂಕಟೇಶ್ ಕಣ್ಣಪ್ಪ ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎಂದರು. ಅತಿಥಿಗಳಿಗೆ ಧನ್ಯವಾದ ತಿಳಿಸಿದ ವಿಷ್ಣು ಮಂಚು, ಏಪ್ರಿಲ್ 25ರಂದು ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಭಾರತಿ ವಿಷ್ಣುವರ್ಧನ್ ಅವರು, ನನ್ನ ಪತಿ ವಿಷ್ಣುವರ್ಧನ್ ಅವರಿಗೆ ಮೋಹನ್ ಬಾಬು ಅವರ ಮೇಲೆ ಅಪಾರ ಗೌರವವಿತ್ತು. ಅವರ ಭಾವನೆ ಪರಸ್ಪರವಾಗಿತ್ತು. ಮೋಹನ್ ಬಾಬು ತಮ್ಮ ಮಗನಿಗೆ ನನ್ನ ಪತಿ (ವಿಷ್ಣು) ಹೆಸರಿಟ್ಟಿರುವುದು ವಿಶೇಷವಾಗಿ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರೆ, ಮೋಹನ್ ಬಾಬು ಮತ್ತು ಅಂಬರೀಶ್ ಅವರ ನಡುವೆ ಆತ್ಮೀಯ ಬಾಂಧವ್ಯವಿತ್ತು. ಅವರ ಮಗ ವಿಷ್ಣು ಮಂಚುನನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.
ಕರ್ನಾಟಕ ವಿತರಣಾ ಹಕ್ಕುಗಳನ್ನು ಪಡೆದ ರಾಕ್‌ಲೈನ್ ವೆಂಕಟೇಶ್, ನಾನು ಈಗಾಗಲೇ ಕಣ್ಣಪ್ಪ ಚಿತ್ರವನ್ನು ನೋಡಿದ್ದೇನೆ. ಇದು ಅದ್ಭುತ ಚಿತ್ರ. ಇದನ್ನು ಕರ್ನಾಟಕಕ್ಕೆ ತರಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದರು. ಸ್ಟೀಫನ್ ದೇವಸ್ಸಿ ಸಂಗೀತ ಸಂಯೋಜಿಸಿದ್ದು ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ.