ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ, ಲಕ್ಷ್ಮಣ್ ಉಟೇಕರ್ ನಿರ್ದೇಶನದ 'ಛಾವಾ' ಇದೀಗ ತೆಲುಗಿನಲ್ಲೂ ಬಿಡುಗಡೆಯಾಗಲು ಸಜ್ಜಾಗಿದೆ. ಹಿಂದಿಯಲ್ಲಿ ತೆರೆಕಂಡು ದೇಶದಾದ್ಯಂತ ಛಾವಾ ಭಾರಿ ಸದ್ದು ಮಾಡುತ್ತಿದೆ. ತೆಲುಗಿಗೆ ಡಬ್ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ನಿರ್ಮಾಪಕರನ್ನು ಒತ್ತಾಯಿಸಿದ್ದರು.
ಚಿತ್ರ ನಿರ್ಮಾಣ ಕಂಪನಿ ಮ್ಯಾಡಾಕ್ ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿರುವ ವಿಕ್ಕಿ ಕೌಶಲ್ ಅವರನ್ನು ಒಳಗೊಂಡ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, 'ಬೇಡಿಕೆಯ ಮೇರೆಗೆ' ಚಿತ್ರವು ತೆಲುಗಿನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ.
'ಭಾರತದ ಧೈರ್ಯಶಾಲಿ ಪುತ್ರ ಛಾವಾ ಅವರ ಸಿನಿಮಾ ಇದೀಗ ಬೇಡಿಕೆಯಿಂದಾಗಿ ತೆಲುಗಿನಲ್ಲಿ ಘರ್ಜಿಸಲು ಸಿದ್ಧವಾಗಿದೆ. ಮಾರ್ಚ್ 7 ರಿಂದ ತೆಲುಗಿನಲ್ಲಿ ಛಾವಾವನ್ನು ವೀಕ್ಷಿಸಲು ಲಭ್ಯವಿರುತ್ತದೆ. ಗೀತಾ ಆರ್ಟ್ಸ್ ಡಿಸ್ಟ್ರಿಬ್ಯೂಷನ್ಸ್ ತೆಲುಗು ಆವೃತ್ತಿಯನ್ನು ವಿತರಿಸಿದೆ. ಛಾವಾ ತೆಲುಗು ಭಾಷೆಯಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ' ಎಂದು ಅವರು ಬರೆದಿದ್ದಾರೆ.
ಸಂಭಾಜಿ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದು, ಸಂಭಾಜಿ ಪತ್ನಿ ಯಶುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಜೊತೆಗೆ ಅಕ್ಷಯ್ ಖನ್ನಾ, ದಿವ್ಯಾ ದತ್ತ ಮತ್ತು ವಿನೀತ್ ಕುಮಾರ್ ಸಿಂಗ್ ಕೂಡ ನಟಿಸಿದ್ದಾರೆ. ಈ ಚಿತ್ರವು ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕಥೆಯನ್ನು ಹೇಳುತ್ತದೆ.
ಮಹಾರಾಷ್ಟ್ರವು ಈ ಚಿತ್ರಕ್ಕೆ ಪ್ರಬಲ ಮಾರುಕಟ್ಟೆಯಾಗಿ ಹೊರಹೊಮ್ಮಿದ್ದು, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಕೂಡ ವಾರದ ಮಧ್ಯದಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಯಶಸ್ವಿಯಾಗಿದೆ.