ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರು ತಿಂಗಳು ಜೈಲು ಸೇರಿ ಇತ್ತೀಚಿಗೆ ರೆಗ್ಯುಲರ್ ಜಾಮೀನು ಪಡೆದ ನಟ ದರ್ಶನ್, ತಮ್ಮ ಮುಂದಿನ 'ಡೆವಿಲ್' ಚಿತ್ರದ ಕೆಲಸವನ್ನು ಪುನರ್ ಆರಂಭಿಸಿದ್ದಾರೆ. ಹೊಸ ವರ್ಷದ ದಿನದಂದು ಚಿತ್ರದ 'ಡಬ್ಬಿಂಗ್' ಕೆಲಸವನ್ನು ಶುರು ಮಾಡಿದ್ದಾರೆ ಎನ್ನುವ ಸುದ್ದಿ ಹೊರಬಂದಿದೆ.
ದರ್ಶನ್ ಜೈಲು ಸೇರುವ ಮುನ್ನ ಡೆವಿಲ್ ಚಿತ್ರದ ಶೇಕಡಾ 50 ರಷ್ಟು ಭಾಗದ ಚಿತ್ರೀಕರಣವನ್ನು ಮುಗಿಸಿದ್ದರು. ಹೊಸ ವರ್ಷದ ಮೊದಲ ದಿನ ಚಿತ್ರಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ಕೆಲಸವನ್ನು ಮಾಡಿಕೊಂಡು ಬರುವ ಸಂಪ್ರದಾಯವನ್ನು ದರ್ಶನ್ ಪಾಲಿಸಿಕೊಂಡು ಬಂದಿದ್ದಾರೆ.
ಈ ಬಾರಿ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಇಲ್ಲಿಯವರೆಗೆ ಚಿತ್ರೀಕರಣಗೊಂಡ ತಮ್ಮ ಭಾಗಕ್ಕೆ ಡಬ್ಬಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅನಾರೋಗ್ಯ ಸಮಸ್ಯೆಗಳಿಂದ ಸಂಪೂರ್ಣವಾಗಿ ಗುಣಮುಖರಾದ ಬಳಿಕ ಫೆಬ್ರವರಿ 22 ರ ನಂತರ ಚಿತ್ರೀಕರಣದಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ. ಡೆವಿಲ್ ಚಿತ್ರವನ್ನು ಮಿಲಿನ್ ಪ್ರಕಾಶ್ ನಿರ್ದೇಶಿಸುತ್ತಿದ್ದು, ರಚನಾ ರೈ ದರ್ಶನ್ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಫೆಬ್ರವರಿ ಹದಿನಾರರಂದು ದರ್ಶನ್ ಬರ್ತ್‌ಡೇ ಪ್ರಯುಕ್ತ ಡೆವಿಲ್ ಚಿತ್ರದ ಕುರಿತು ಬ್ರೇಕಿಂಗ್ ನ್ಯೂಸ್ ಹೊರ ಬೀಳುವ ಸಾಧ್ಯತೆ ಇದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.