ಕೆ ಮಂಜು ನಿರ್ಮಾಣದ ಅವರ ಪುತ್ರ ಶ್ರೇಯಸ್ ಮಂಜು ನಟನೆಯ 'ವಿಷ್ಣು ಪ್ರಿಯ' ಚಿತ್ರ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಫೆಬ್ರುವರಿ 21ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 1990 ರ ದಶಕದಲ್ಲಿನ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಲವ್, ಕುಟುಂಬ ಮತ್ತು ತ್ಯಾಗದ ಬಗ್ಗೆ ತೆರೆದುಕೊಳ್ಳುತ್ತದೆ.
ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವಿಕೆ ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಚಿತ್ರದ ಮತ್ತೊಂದು ವಿಶೇಷ. ಅಲ್ಲದೆ, ಕಣ್ಸನ್ನೆ ಬೆಡಗಿ ಎಂದೇ ಹೆಸರಾದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯು ಚಿತ್ರಕ್ಕೆ ಮತ್ತಷ್ಟು ಭಾವನಾತ್ಮಕ ಮೆರುಗನ್ನು ನೀಡಿದೆ. ಧಾರವಾಡದ ಸಿಂಧುಶ್ರೀ ಚಿತ್ರಕ್ಕೆ ಕಥೆ ಬರೆದಿದ್ದು, ಕುಟುಂಬಕ್ಕೆ ಅಪಾರ ಮೌಲ್ಯ ನೀಡುವ ಮತ್ತು ಪ್ರೀತಿಗಾಗಿ ಯಾವುದೇ ಹಂತಕ್ಕೂ ಹೋಗಲು ಸಿದ್ಧವಿರುವ ಯುವಕ ವಿಷ್ಣುವಿನ ಸುತ್ತ ಚಿತ್ರ ಸುತ್ತುತ್ತದೆ. ಇದು ಕೌಟುಂಬಿಕ ಬಂಧಗಳು, ತ್ಯಾಗ ಮತ್ತು ಇತರ ಅಡೆತಡೆಗಳನ್ನು ಮೀರಿದ ಪ್ರೀತಿಯ ಶಕ್ತಿಯ ಕುರಿತಾಗಿದೆ.
ಚಿತ್ರದಲ್ಲಿ ವಿಷ್ಣು ತಂದೆಯಾಗಿ ಅಚ್ಯುತ್ ಕುಮಾರ್ ಮತ್ತು ಪ್ರಿಯಾ ತಂದೆಯಾಗಿ ಸುಚೇಂದ್ರ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ರವಿ ಶ್ರೀವತ್ಸ ಬರೆದಿದ್ದಾರೆ. ಛಾಯಾಗ್ರಹಣವನ್ನು ವಿನೋದ್ ಭಾರತಿ ನಿರ್ವಹಿಸಿದರೆ, ಸಂಕಲನವನ್ನು ಸುರೇಶ್ ಅರಸ್ ನಿರ್ವಹಿಸಿದ್ದಾರೆ.