ನಂದ ಲವ್ಸ್ ನಂದಿತ ಚಿತ್ರದ ಮೂಲಕ ಸಿನಿಪ್ರೇಕ್ಷಕರ ಹೃದಯಗಳನ್ನು ಕದ್ದಿದ್ದ ನಟಿ ನಂದಿತಾ ಶ್ವೇತಾ, ಹಲವು ವರ್ಷಗಳ ನಂತರ ಇದೀಗ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಜಿಂಕೆ ಮರಿ ಎಂದೇ ಹೆಸರಾಗಿದ್ದ ನಂದಿತಾ ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಅಲ್ಲಿ ಅವರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೆ ನೆಲೆ ಕಂಡುಕೊಳ್ಳುವ ತವಕ ಅವರದು.
'ನಾನು ಬೇರೆಡೆ ಗಮನ ಸೆಳೆದಿರಬಹುದು. ಆದರೆ ಕೊನೆಯಲ್ಲಿ, ನಾನು ಬೆಂಗಳೂರಿನಲ್ಲಿ ವಾಸಿಸುತ್ತೇನೆ. ಕನ್ನಡ ಮಾತನಾಡುತ್ತೇನೆ ಮತ್ತು ಇದು ಮನೆ' ಎಂದು ನಂದಿತಾ ಹೇಳುತ್ತಾರೆ.
ಮಹಿಳಾ ಪ್ರಧಾನ ಚಿತ್ರ ಬೆನ್ನಿ ಮೂಲಕ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದು, ಪೆಪೆ ಖ್ಯಾತಿಯ ಶ್ರೀಲೇಶ್ ಎಸ್ ನಾಯರ್ ಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಡೇ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರಾಮೇನಹಳ್ಳಿ ಜಗನ್ನಾಥ ನಿರ್ಮಿಸಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದು, ಯೋಜನೆಗೆ ಹೊಸ ಸಂಚಲನ ಮೂಡಿಸಿದೆ. ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್, ಬರಹಗಾರರಾದ ಗುರುಪ್ರಸಾದ್ ನಾರ್ನಾಡ್, ರಂಜನ್ ನರಸಿಂಹಮೂರ್ತಿ, ಮನು ಶೆಡ್ಗಾರ್, ಪ್ರಹ್ಲಾದ್ ಪುಥಂಚೇರಿ, ಪೂರ್ವಿಕ್ ವಿ ಪ್ರಸಾದ್ ಮತ್ತು ಪ್ರಖ್ಯಾತ್ ಎಸ್ ಕೂಡ ಚಿತ್ರದ ಭಾಗವಾಗಿದ್ದಾರೆ.
'ಕಳೆದ ಕೆಲವು ವರ್ಷಗಳಲ್ಲಿ, ನಾನು ತಮಿಳು ಮತ್ತು ತೆಲುಗಿನಲ್ಲಿ ಬಲವಾದ, ಮಹಿಳಾ ಕೇಂದ್ರಿತ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಅವು ನನಗೆ ಮನ್ನಣೆ ಮತ್ತು ಆತ್ಮವಿಶ್ವಾಸವನ್ನು ನೀಡಿವೆ. ಹಾಗಾಗಿ ನಾನು ಕನ್ನಡಕ್ಕೆ ಮರಳಲು ನಿರ್ಧರಿಸಿದಾಗ, ನಾನು ಇನ್ನೊಂದು ಚಿತ್ರ ಮಾಡಲು ಬಯಸಲಿಲ್ಲ. ನನಗೆ ಅರ್ಥಪೂರ್ಣವಾದ ಕಥೆ ಬೇಕಾಗಿತ್ತು' ಎಂದರು.
ಈ ಪುನರಾಗಮನ ತಾತ್ಕಾಲಿಕವಲ್ಲ. 'ನಾನು ಕನ್ನಡ ಚಿತ್ರವೊಂದನ್ನು ಕೈಗೆತ್ತಿಕೊಂಡು ಮತ್ತೆ ಕಣ್ಮರೆಯಾಗುತ್ತೇನೆ ಎಂದು ಜನರು ಭಾವಿಸಬಾರದು. ನಾನು ಇಲ್ಲೇ ಇರುತ್ತೇನೆ. ಈ ಕಥೆಯ ಬಲ ಮತ್ತು ನನ್ನ ಅನುಭವದೊಂದಿಗೆ, ನಮ್ಮಲ್ಲಿ ಕನ್ನಡದ ಬಲಿಷ್ಠ ನಾಯಕಿಯರು ಇದ್ದಾರೆ ಎಂದು ತೋರಿಸಲು ನಾನು ಬಯಸುತ್ತೇನೆ' ಎಂದರು.
2025 ಅನ್ನು ತನ್ನ ಕನ್ನಡ ಪುನರಾಗಮನ ವರ್ಷ ಎಂದು ಕರೆದ ಅವರು, 'ಈ ಚಿತ್ರವು ಹೊಸ ಅಧ್ಯಾಯವಾಗುತ್ತದೆ. ನಾನು ನನ್ನ ವೃತ್ತಿಜೀವನವನ್ನು ಇಲ್ಲಿ ಕಟ್ಟಿಕೊಳ್ಳಲು ಬಯಸುತ್ತೇನೆ. ನಾನು ಸೇರಿರುವ ಸ್ಥಳ ಇದು' ಎಂದು ತಿಳಿಸಿದರು.