ಬೆಂಗಳೂರು: ನಟ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂಬ ಭರವಸೆಯಿದೆ ಎಂದು ನಟಿ, ಮಾಜಿ ಸಂಸದೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದೇ ತಡ ಡಿ ಬಾಸ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದರು.
ನಟಿ ರಮ್ಯಾ ಬಗ್ಗೆ ಫೇಸ್ ಬುಕ್, ಎಕ್ಸ್ ಖಾತೆ, ಇನ್ಸ್ಟಾಗ್ರಾಮ್ ನಲ್ಲಿ ಮನಸೋ ಇಚ್ಛೆ ಕೆಟ್ಟದಾಗಿ ಕಮೆಂಟ್ ಮಾಡಲು, ಬೆದರಿಕೆ ಹಾಕಲು ಆರಂಭಿಸಿದರು. ಇದಕ್ಕೂ ರಮ್ಯಾ ಹೆದರಲಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡವರಿಗೆ ಚೆನ್ನಾಗಿಯೇ ತಿರುಗೇಟು ಕೊಟ್ಟರು ಅಲ್ಲದೇ ಸಭ್ಯತೆಯ ಪಾಠವನ್ನೂ ಮಾಡಿದರು. ಮಾಧ್ಯಮಗಳ ಮೂಲಕವೂ ಖಾರವಾಗಿಯೇ ಪ್ರತಿಕ್ರಿಯಿಸಿದರು.
ಡಿ ಬಾಸ್ ಫ್ಯಾನ್ಸ್ ಮತ್ತು ರಮ್ಯಾ ನಡುವಿನ ಸೋಷಿಯಲ್ ಮೀಡಿಯಾ ವಾರ್ ಜೋರಾಗುತ್ತಿದೆ. ಈ ಮಧ್ಯೆ ರಮ್ಯಾ ಸೈಬರ್ ಕ್ರೈಮ್ ಗೆ ದೂರು ನೀಡುವ ಬಗ್ಗೆ ಆಲೋಚಿಸುತ್ತಿದ್ದಾರೆ. ಇನ್ನೊಂದೆಡೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಈ ಬೆಳವಣಿಗೆ ಇರಿಸುಮುರುಸು ಆದಂತೆ ಕಾಣುತ್ತಿದೆ. ಅವರು ರಮ್ಯಾ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಲೀಸರಿಗೆ ಪತ್ರ ಬರೆದ ಮಹಿಳಾ ಆಯೋಗ: ಈ ವಿಚಾರ ರಾಜ್ಯ ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು, ರಮ್ಯಾರವರ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಅವಹೇಳನಕಾರಿ ಸಂದೇಶಗಳು ಬರುತ್ತಿವೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ, ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.