ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಬಹು ನಿರೀಕ್ಷಿತ 'ಡೆವಿಲ್- ದಿ ಹೀರೋ' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕ ಪ್ರಕಾಶ್ ವೀರ್ ಸಜ್ಜಾಗಿದ್ದಾರೆ. ಶೀರ್ಷಿಕೆಗಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಚಿತ್ರದ ಚಿತ್ರೀಕರಣ 2024ರ ಮಾರ್ಚ್‌ನಲ್ಲಿ ಪ್ರಾರಂಭವಾಯಿತು. ಆದರೆ, ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರಿಂದ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು. ಮಾರ್ಚ್ 11 ರಿಂದ ಚಿತ್ರತಂಡ ಮತ್ತೆ ಮತ್ತೆ ಚಿತ್ರೀಕರಣಕ್ಕೆ ಮರಳಲಿದೆ ಎಂದು ಮೂಲಗಳು ದೃಢಪಡಿಸಿವೆ. ಬಳಿಕ ದರ್ಶನ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ದರ್ಶನ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ಸ್ನೀಕ್ ಪೀಕ್ ಮೂಲಕ ಚಿತ್ರತಂಡ ಈಗಾಗಲೇ ಅಭಿಮಾನಿಗಳಲ್ಲಿ ಕಾತರ ಹುಟ್ಟುಹಾಕಿದೆ. ಡೆವಿಲ್- ದಿ ಹೀರೋ ಚಿತ್ರದಲ್ಲಿ ಬಹುಭಾಷಾ ನಟ ಮಹೇಶ್ ಮಂಜ್ರೇಕರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ರಚನಾ ರೈ ನಾಯಕಿಯಾಗಿದ್ದಾರೆ. ಚಿತ್ರತಂಡ ಇನ್ನೂ ಚಿತ್ರದ ತಾರಾಗಣದ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ತಾರಕ್ ಚಿತ್ರದ ಯಶಸ್ಸಿನ ನಂತರ ದರ್ಶನ್ ಮತ್ತು ಪ್ರಕಾಶ್ ವೀರ್ ಡೆವಿಲ್ ಚಿತ್ರಕ್ಕಾಗಿ ಒಂದಾಗಿದ್ದಾರೆ. ಚಿತ್ರವನ್ನು ಸಂಪೂರ್ಣ ಮಾಸ್ ಎಂಟರ್ಟೈನರ್ ಎನ್ನಲಾಗಿದೆ.
ಜೈ ಮಾತಾ ಕಂಬೈನ್ಸ್ ಪ್ರಸ್ತುತಪಡಿಸುವ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸುತ್ತಿರುವ ಡೆವಿಲ್- ದಿ ಹೀರೋ ಚಿತ್ರಕ್ಕೆ ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. ಅಜನೀಶ್ ಲೋಕನಾಥ್ ಮೊದಲ ಬಾರಿಗೆ ದರ್ಶನ್ ಅವರ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಆಡಿಯೋ ಹಕ್ಕುಗಳನ್ನು ಸರೆಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.