ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನು ಮೇಲೆ ಹೊರಬಂದು 9 ತಿಂಗಳ ಬಳಿಕ ನಟ ದರ್ಶನ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಜೈಲಿಗೆ ಹೋಗಿದ್ದರಿಂದ ಅರ್ಧಕ್ಕೆ ನಿಂತು ಹೋಗಿದ್ದ ‘ಡೆವಿಲ್’ ಚಿತ್ರದ ಚಿತ್ರೀಕರಣ ಇಂದು ಮೈಸೂರಿನಲ್ಲಿ ಮತ್ತೆ ಆರಂಭವಾಗಿದೆ. ಇಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮೊದಲು ನಟ ದರ್ಶನ್ ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.
ಚಾಮುಂಡಿ ದೇವಿಗೆ ನಮನ
‘ಡೆವಿಲ್’ ಚಿತ್ರೀಕರಣದಲ್ಲಿ ಇಂದು ಭಾಗಿಯಾಗುತ್ತಿರುವ ದರ್ಶನ್ ಶೂಟಿಂಗ್‌ಗೂ ಮುನ್ನ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ್ದಾರೆ. ಇಲ್ಲಿ 15ರವರೆಗೆ ಶೂಟಿಂಗ್ ನಡೆಸಲು ಅನುಮತಿ ಸಿಕ್ಕಿದೆ.
ಸರ್ಕಾರಿ ಅತಿಥಿ ಗೃಹದಲ್ಲಿ ಶೂಟಿಂಗ್
ಇಂದಿನಿಂದ ಮಾ.14ರವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ‘ಡೆವಿಲ್’ ಶೂಟಿಂಗ್ ನಡೆಯಲಿದ್ದು, ಮಾ.15ರಂದು ಲಲಿತಮಹಲ್ ಪ್ಯಾಲೇಸ್‌ನಲ್ಲಿ ಶೂಟಿಂಗ್ ನಡೆಯಲಿದೆ. ಖಾಸಗಿ ಭದ್ರತಾ ಪಡೆ ಹಾಗೂ ಪೊಲೀಸ್ ಪಡೆ ಎರಡನ್ನೂ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಇನ್ಸ್ಟ್ರಾದಲ್ಲಿ ಅನ್ ಫಾಲೋ
ಇನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಿಂದ ತಮ್ಮ ಪುತ್ರ ವಿನೀಶ್, ಡಿ ಕಂಪೆನಿ, ಮಾಜಿ ಸಂಸದೆ ಸುಮಲತಾ, ಅಭಿಷೇಕ್ ಅಂಬರೀಷ್ ಸೇರಿದಂತೆ ಎಲ್ಲರನ್ನೂ ಅನ್ ಫಾಲೋ ಮಾಡಿದ್ದು ನಟ ದರ್ಶನ್ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.