ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗ, ಪ್ರೇಕ್ಷಕರ ಬಗ್ಗೆ ಮನದ ಕಡಲು ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಕನ್ನಡ ಸಿನಿಮಾವನ್ನು ಪ್ರೇಕ್ಷಕರು ನೋಡುವುದಿಲ್ಲ, ಪ್ರೋತ್ಸಾಹ ಕೊಡುವುದಿಲ್ಲ ಎಂದು ನಾನು ಕೂಡ ಹಿಂದೆ ಹೇಳುತ್ತಿದ್ದೆ, ಆಮೇಲೆ ಒಂದು ದಿನ ಕುಳಿತುಕೊಂಡು ಸಿನಿಮಾ ನೋಡುವಾಗ ಅನ್ನಿಸಿತು, ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿಕೊಂಡು ಒಳ್ಳೆ ಕನ್ನಡ ಸಿನಿಮಾವನ್ನು ಕೊಟ್ಟರೆ ಪ್ರೇಕ್ಷಕ ನೋಡದೆ ತಿರಸ್ಕರಿಸುವುದಿಲ್ಲ, ಯಾವತ್ತೂ ಕೈಬಿಟ್ಟಿಲ್ಲ,ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಚಿತ್ರಗಳನ್ನು ಹರಸುತ್ತಾರೆ ಎಂದು ಯಶ್ ನುಡಿದರು.
ಸಾಕಷ್ಟು ಮಂದಿ ನನ್ನ ಬಳಿ ಬಂದು ಹೊಸಬರ ಚಿತ್ರಗಳನ್ನು ಲಾಂಚ್ ಮಾಡಿ, ನಮಗೆ ಹರಸಿ ಎಂದು ಕೇಳುತ್ತಿರುತ್ತಾರೆ. ಈವೆಂಟ್ ಮಾಡಿ ಎಂದು ಕೇಳುತ್ತಾರೆ. ಆದರೆ ನಾನು ನಂಬುವುದು ಈವೆಂಟ್ ಮಾಡುವುದರಿಂದ ಪ್ರಚಾರ ಸಿಗಬಹುದು, ಚಿತ್ರ ನಿಜವಾಗಿ ಗೆಲ್ಲುವುದು ನಾವು ಬರುವುದರಿಂದಲ್ಲ. ಚಿತ್ರಕ್ಕೆ ಮಾಡುವ ಕೆಲಸದಿಂದ, ಸದಭಿರುಚಿಯ ಚಿತ್ರಗಳಿಂದ.
ಚಿತ್ರರಂಗದ ಇಂದಿನ ಕಾಲಕ್ಕೆ ತಕ್ಕಂತೆ ನಾವು ಕೂಡ ಅಪ್ ಗ್ರೇಡ್ ಆಗಬೇಕು, ಕೆಲಸ ಕಲಿತು ದೊಡ್ಡ ಗುರಿ ಇಟ್ಟುಕೊಂಡು ಸ್ವಾಭಿಮಾನ ಇಟ್ಟುಕೊಂಡು ನಾವು ಯಾರಿಗೂ ಕಮ್ಮಿಯಲ್ಲ ಎಂದು ತಲೆತಗ್ಗಿಸದೆ ತಲೆಯೆತ್ತಿ ಕಷ್ಟಪಟ್ಟು ಕೆಲಸ ಮಾಡಿ ಮುಂದುವರಿಯೋಣ.
ಬರೀ ನಟನೆ ಮಾತ್ರ ಸಿನಿಮಾ ಅಲ್ಲ
ಇಂದಿನ ತಲೆಮಾರಿನ ನಟ-ನಟಿಯರು ಸಾಕಷ್ಟು ಕಲಿತುಕೊಂಡು ಚಿತ್ರರಂಗಕ್ಕೆ ಬನ್ನಿ, ಬರೀ ನಟನೆ ಮಾತ್ರ ಸಿನಿಮಾವಲ್ಲ. ವೃತ್ತಿಯನ್ನು ಹೇಗೆ ರೂಪಿಸಿಕೊಳ್ಳಬೇಕು, ಕಲಿಯಬೇಕು, ಬೆಳೆಯಬೇಕು ಟ್ರೆಂಡ್ ಹೇಗಿದೆ ಎಂದು ತಿಳಿದುಕೊಂಡು ಬನ್ನಿ ಎಂದು ಯಶ್ ಕಿವಿಮಾತು ಹೇಳಿದರು.