ರಂಗಭೂಮಿ ಕಲಾವಿದ, ಹಾಸ್ಯ ಚಿತ್ರನಟ ರಾಜು ತಾಳಿಕೋಟೆ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದರು. ಉಡುಪಿಯಲ್ಲಿ ಶೈನ್ ಶೆಟ್ಟಿ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಭಾನುವಾರ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದುರಾದೃಷ್ಟವಶಾತ್ ಬದುಕುಳಿಯಲಿಲ್ಲ. ಇನ್ನು ಅಂದು ಏನಾಯ್ತು ಎಂಬುದನ್ನು ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ವಿವರಿಸಿದ್ದಾರೆ. ರಾಜು ತಾಳಿಕೋಟೆ ನನ್ನನ್ನು ಮಗನಂತೆ ನೋಡುತ್ತಿದ್ದರು. ನಿನಗೋಸ್ಕರ ಈ ಚಿತ್ರ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 7ರಲ್ಲಿ ನಾವು ಜೊತೆಗೆ ಭಾಗವಹಿಸಿದ್ದೇವು. ರಾಜು ತಾಳಿಕೋಟೆ ತುಂಬಾ ಹಸನ್ಮುಖಿ. ಎಲ್ಲರನ್ನು ಬಹಳ ಪ್ರೀತಿಸುವ ವ್ಯಕ್ತಿ. ಸಿನಿಮಾ ಮಾಡುವ ಅವಕಾಶ ಸಿಕ್ಕಾಗ ನಾನು ರಾಜು ಅವರನ್ನು ಸಂಪರ್ಕಿಸಿದೆ. ಅವರೂ ಸಂತೋಷದಿಂದ ಒಪ್ಪಿಕೊಂಡಿದ್ದರು. ರಾಜು ತಾಳಿಕೋಟೆಯವರಿಗೆ ಒಟ್ಟು 40 ದಿನದ ಶೆಡ್ಯೂಲ್ ಫಿಕ್ಸ್ ಆಗಿತ್ತು. ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿ ಉಡುಪಿಗೆ ಬಂದಿದ್ದೇವು.
ಬೆಳಗ್ಗೆ ಶೂಟಿಂಗ್ ಇದ್ದಿದ್ದರಿಂದ ಎಲ್ಲರೂ ಬೇಗ ಮಲಗಿದೇವು. ಆದರೆ 11:59ಕ್ಕೆ ಉಸಿರಾಟ ಸಮಸ್ಯೆ ಅಂತ ಫೋನ್ ಮಾಡಿದ್ದರು. ಪಕ್ಕದ ರೂಮ್ ನಲ್ಲೇ ಇದ್ದಿದ್ದರಿಂದ ನಾನು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದೆ. ಆದರೆ ಪ್ರಯೋಜನವಾಗಲಿಲ್ಲ ಎಂದು ಶೈನ್ ಶೆಟ್ಟಿ ಹೇಳಿದರು. ಕಾರಲ್ಲಿ ಆಸ್ಪತ್ರೆಗೆ ಹೋಗುವಾಗ ನನ್ನೊಂದಿಗೆ ರಾಜು ಅವರು ಮಾತನಾಡುತ್ತಿದ್ದರು. ಬೇಗ ಆಸ್ಪತ್ರೆಗೆ ಹೋಗು, ನನ್ನನ್ನು ಉಳಿಸಿಕೊಡು ಎನ್ನುತ್ತಿದ್ದರು ಎಂದು ಶೈನ್ ಶೆಟ್ಟಿ ಹೇಳಿದರು.