ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ 200 ರೂ.ಗೆ ಮಿತಿಗೊಳಿಸಿದ ಕೆಲವು ದಿನಗಳ ನಂತರ, ಪ್ರಮುಖ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪತ್ರಿಕಾ ಹೇಳಿಕೆಯ ಪ್ರಕಾರ, ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕೀಸ್ಟೋನ್ ಎಂಟರ್‌ಟೈನ್‌ಮೆಂಟ್ ಮತ್ತು ವಿಕೆ ಫಿಲ್ಮ್ಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿವೆ.
ರಾಜ್ಯ ಸರ್ಕಾರದ ಈ ಕ್ರಮವು ತೆರಿಗೆ ಹೊರತುಪಡಿಸಿ, ಆದಾಯ ಮತ್ತು ಬಾಕ್ಸ್ ಆಫೀಸ್ ಗಳಿಕೆ, ವಿಶೇಷವಾಗಿ ದೊಡ್ಡ ಬಜೆಟ್ ಸಿನಿಮಾಗಳ ಆದಾಯಕ್ಕೆ ಹಾನಿ ಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
"ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪದ ಟಿಕೆಟ್ ಬೆಲೆ ನಿಗದಿ ಮಾಡುವುದರಿಂದ ಆದಾಯ ಕಡಿಮೆಯಾಗುತ್ತದೆ ಮತ್ತು ನಿರ್ಮಾಪಕರು ಮತ್ತು ಥಿಯೇಟರ್ ಮಾಲೀಕರಿಗೆ ಆರ್ಥಿಕ ನಷ್ಟವಾಗುತ್ತದೆ" ಎಂದು ಅರ್ಜಿದಾರರು ಹೇಳಿದ್ದಾರೆ.
ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಚಿತ್ರ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದ್ದು, ರಾಜ್ಯ ಸರ್ಕಾದ ಈ ಹೊಸ ನಿಯಮವು ಪರಿಣಾಮ ಬೀರುವ ಆತಂಕ ಎದುರಾಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿರುವ ಈ ಚಿತ್ರವು, ಮೊದಲ ದಿನವೇ ದಾಖಲೆ ಗಳಿಕೆ ಮಾಡುವ ನಿರೀಕ್ಷೆಯಲ್ಲಿದೆ. ಆದರೆ, ಟಿಕೆಟ್ ದರ ಮಿತಿಯಿಂದಾಗಿ, ಚಿತ್ರದ ಒಟ್ಟಾರೆ ಕಲೆಕ್ಷನ್‌ಗೆ ಹೊಡೆತ ಬೀಳಬಹುದು ಎಂದು ಹೇಳಲಾಗುತ್ತಿದೆ.