ಕಾಂತಾರ ಚಿತ್ರದ ಯಶಸ್ಸಿನ ಬಳಿಕ ತೀವ್ರ ಕುತೂಹಲ ಮೂಡಿಸಿರುವ ಕಾಂತಾರ: ಚಾಪ್ಟರ್ 1 ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಈ ಬಾರಿ ಚಿತ್ರದ ಘರ್ಜನೆ ತಮಿಳುನಾಡಿನಾದ್ಯಂತ ಪ್ರತಿಧ್ವನಿಸಲಿದೆ. ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ ಚಿತ್ರವು ಅಕ್ಟೋಬರ್ 2 ರಂದು ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರೇಕ್ಷಕರನ್ನು ತಲುಪಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಪ್ರಮುಖ ತಮಿಳು ವಿತರಕರೊಂದಿಗೆ ಕೈಜೋಡಿಸಿದೆ.
ಕಾಂತಾರ: ಚಾಪ್ಟರ್ 1 ಈಗಾಗಲೇ ದೇಶದಾದ್ಯಂತ ಬಿರುಗಾಳಿಯನ್ನು ಸೃಷ್ಟಿಸುತ್ತಿದೆ ಮತ್ತು ಕೇರಳ, ಆಂಧ್ರಪ್ರದೇಶ ಮತ್ತು ಉತ್ತರ ಭಾರತದ ಸರ್ಕ್ಯೂಟ್‌ನಲ್ಲಿ ಬಲವಾದ ವಿತರಣಾ ಸಂಸ್ಥೆಗಳೊಂದಿಗೆ ಕೈಜೋಡಿಸಿದ ನಂತರ, ತಮಿಳುನಾಡಿನಲ್ಲಿಯೂ ಇದೀಗ ಚಿತ್ರದ ಅದ್ಧೂರಿ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. 2500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಲಿರುವ ಚಿತ್ರದ ಬಗ್ಗೆ ಈಗಾಗಲೇ ಉತ್ಸಾಹ ಹೆಚ್ಚಿದೆ.
ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಮತ್ತು ವಿಜಯ್ ಕಿರಗಂದೂರು ನಿರ್ಮಿಸಿದ ಈ ಚಿತ್ರವು ಕಾಂತಾರದಲ್ಲಿನ ದಂತಕಥೆಯ ದೈವಿಕ ಬೇರುಗಳನ್ನು ಅನ್ವೇಷಿಸುತ್ತದೆ. ರಿಷಬ್ ಶೆಟ್ಟಿ ಕ್ಯಾಮೆರಾ ಮುಂದೆ ಮತ್ತು ಹಿಂದೆ ಕೆಲಸ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಕನಕವತಿಯಾಗಿ ಕಾಣಿಸಿಕೊಂಡಿದ್ದಾರೆ.
ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರವು ನಿರೀಕ್ಷೆಯನ್ನು ಹೆಚ್ಚಿಸಿದ್ದು, ಕಾಂತಾರ: ಚಾಪ್ಟರ್ 1 ಅನ್ನು ಪ್ರಾದೇಶಿಕವಾಗಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ಸಿದ್ಧಪಡಿಸಲಾಗಿದೆ. ಚಿತ್ರದಲ್ಲಿ ಅರವಿಂದ್ ಕಶ್ಯಪ್ ಛಾಯಾಗ್ರಾಹಕರಾಗಿ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಕರಾಗಿದ್ದಾರೆ. ಗುಲ್ಶನ್ ದೇವಯ್ಯ ಸೇರಿದಂತೆ ಇತರ ಕಲಾವಿದರ ದಂಡೇ ಚಿತ್ರದಲ್ಲಿ ನಟಿಸಿದೆ.