ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿರುವ ತಮ್ಮ ಬ್ರೇಕಪ್ ವದಂತಿಗಳ ಕುರಿತು ನಟಿ ಅನುಪಮಾ ಪರಮೇಶ್ವರನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು, ಕಳೆದ ಒಂದು ವರ್ಷ ತಮಗೆ ಭಾವನಾತ್ಮಕವಾಗಿ ಅತ್ಯಂತ ಕಷ್ಟಕರವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಅನುಪಮಾ ಪರಮೇಶ್ವರನ್ ಅವರು ಕ್ರೇಜಿ ಕಲ್ಯಾಣಂ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವಾಗ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದರು.
ತಮ್ಮ ವೈಯಕ್ತಿಕ ಜೀವನದ ಮೇಲಿನ ವದಂತಿಗಳನ್ನು ನೇರವಾಗಿ ಖಚಿತಪಡಿಸದ ಅಥವಾ ನಿರಾಕರಿಸದ ಅನುಪಮಾ, ಕಳೆದ ಒಂದು ವರ್ಷ ಬಹಳ ಸವಾಲಿನಿಂದ ಕೂಡಿತ್ತು. ಈ ಹಂತದಲ್ಲಿ ನಾನು ನನ್ನನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದೆ. ಇಷ್ಟು ದಿನ ಬೇರೆಯವರಿಗಾಗಿ ಬದುಕುತ್ತಿದ್ದ ನಾನು, ಈಗ ನನಗಾಗಿ ಜೀವಿಸಲು ಮತ್ತು ನನ್ನ ಜೀವನದ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಲು ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.
ಪ್ರಸ್ತುತ ತಾವು ನೆಮ್ಮದಿಯ ಜೀವನ ನಡೆಸುತ್ತಿದ್ದು, ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುವ ಬದಲು ಭವಿಷ್ಯದತ್ತ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ತಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ವಿಚಾರವನ್ನೂ ಸಾರ್ವಜನಿಕವಾಗಿ ವಿವರಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಅನುಪಮಾ ಅವರು ಈಗ ಖುಷಿಯಾಗಿದ್ದಾರೆ ಎಂಬ ವಿಷಯವು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.
ಬೈಸನ್’ ಸಿನಿಮಾದಲ್ಲಿ ತಮಿಳು ನಟ ಧ್ರುವ್ ವಿಕ್ರಮ್ ಅವರೊಂದಿಗೆ ಅನುಪಮಾ ನಟಿಸಿದ ನಂತರ ಇಬ್ಬರ ನಡುವೆ ಪ್ರೇಮಸಂಬಂಧವಿದೆ ಎಂಬ ವದಂತಿಗಳು ಬಲವಾಗಿದ್ದವು.
ಇತ್ತೀಚೆಗೆ ಅನುಪಮಾ ಇನ್‌ಸ್ಟಾಗ್ರಾಮ್‌ನಲ್ಲಿ ಧ್ರುವ್ ಅವರನ್ನು ಅನ್‌ಫಾಲೋ ಮಾಡಿದ್ದು ಹಾಗೂ ಭಾವುಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತ್ತು. ಆದರೆ, ಈ ಜೋಡಿ ಈವರೆಗೆ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.