ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಚಿತ್ರಮಂದಿರಗಳಲ್ಲಿ ಎರಡು ವಾರಗಳನ್ನು ಪೂರ್ಣಗೊಳಿಸಿದೆ. ಮ್ಯಾಕ್ಸ್ ನಂತರ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರ ₹51.30 ಕೋಟಿ ಗಳಿಸುವ ಮೂಲಕ ಮೂರನೇ ವಾರಕ್ಕೆ ಕಾಲಿಟ್ಟಿದೆ. ಡಿಸೆಂಬರ್ 25ರಂದು ಬಿಡುಗಡೆಯಾದ ಈ ಚಿತ್ರವು, ಹೆಚ್ಚಾಗಿ ಕುಟುಂಬಗಳನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.
ಈ ಚಿತ್ರವು ಆ್ಯಕ್ಷನ್-ಪ್ಯಾಕ್ಡ್ ಸನ್ನಿವೇಶಗಳು ಮತ್ತು ಭಾವನಾತ್ಮಕ ವಿಚಾರಗಳ ಸಂಯೋಜನೆಯಿಂದಾಗಿ ಮೆಚ್ಚುಗೆ ಪಡೆದಿದೆ. ಹಲವಾರು ಚಿತ್ರಮಂದಿರಗಳು, ವಿಶೇಷವಾಗಿ ಪ್ರಮುಖ ಸರ್ಕ್ಯೂಟ್‌ಗಳಲ್ಲಿ ಜನರು ಮತ್ತೆ ಮತ್ತೆ ಸಿನಿಮಾ ವೀಕ್ಷಿಸಲು ಮುಂದಾಗಿದ್ದಾರೆ.
ಚಿತ್ರ ಬಿಡುಗಡೆಯಾದ ಆರಂಭಿಕ ಹಂತದ ನಂತರವೂ ಸ್ಥಿರವಾದ ಸಂಗ್ರಹವನ್ನು ಕಾಯ್ದುಕೊಳ್ಳುವುದು ಚಿತ್ರಗಳಿಗೆ ಹೆಚ್ಚು ಸವಾಲಿನ ಸಂಗತಿಯಾಗಿದೆ ಎಂದು ಟ್ರೇಡ್ ವಿಶ್ಲೇಷಕರು ಗಮನಸೆಳೆದಿದ್ದಾರೆ. ಇಂತಹ ಸಂದರ್ಭದಲ್ಲಿ, ಬಿಡುಗಡೆಯಾದ ಮೂರನೇ ವಾರವೂ ಮಾರ್ಕ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಸಿಂಗಲ್-ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ, ಚಿತ್ರದ ಗಳಿಕೆಯು ಸ್ಥಿರವಾಗಿಯೇ ಉಳಿದಿದೆ.
ತಮಿಳಿನ ಸತ್ಯಜ್ಯೋತಿ ಫಿಲಂಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ಮಾರ್ಕ್ ಡಿಸೆಂಬರ್ 25 ರಂದು ರಾಜ್ಯದಾದ್ಯಂತ ಬಿಡುಗಡೆಯಾದಾಗಿನಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ.
ಸುದೀಪ್ ಜೊತೆಗೆ ನವೀನ್ ಚಂದ್ರ, ದೀಪ್ಶಿಕಾ, ಗುರು ಸೋಮಸುಂದರಂ, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಡ್ರ್ಯಾಗನ್ ಮಂಜು, ಗೋಪಾಲಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಯೋಗಿ ಬಾಬು, ಶೈನ್ ಟಾಮ್ ಚಾಕೋ ಮುಂತಾದವರು ನಟಿಸಿದ್ದಾರೆ.