ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ತೆರೆಕಂಡಿದ್ದು ಜನರ ನಿರೀಕ್ಷೆಯಂತೆಯೇ ಗಿಲ್ಲಿ ನಟ ವಿನ್ನರ್ ಆಗಿ ಟ್ರೋಫಿ ಎತ್ತಿಹಿಡಿದಿದ್ದಾರೆ. ಈ ನಡುವೆ ಕಳೆದ 12 ವರ್ಷಗಳಿಂದ ಅಭಿಮಾನಿಗಳನ್ನು ಕಾಡುತ್ತಿದ್ದ ಒಂದು ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಅದು ಬಿಗ್ ಬಾಸ್ ಧ್ವನಿ ಯಾರದ್ದು ಎಂದು..
ಹೌದು.. ನಿನ್ನೆ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 12 ನಲ್ಲಿ ಟಾಪ್ ಸಿಕ್ಸ್ ಸ್ಪರ್ಧಿಗಳಾಗಿದ್ದ ಅಶ್ವಿನಿಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಮ್ಯೂಟೆಂಟ್ ರಘು ಮತ್ತು ಧನುಷ್ ಇವರ ಪೈಕಿ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. 6ನೇಯ ಸ್ಪರ್ಧಿಯಾಗಿ ಧನುಷ್ ಹೊರಬಂದರೆ, 5ನೇ ಸ್ಪರ್ಧಿಯಾಗಿ ಮ್ಯೂಟೆಂಟ್ ರಘು, 4ನೇಯವರಾಗಿ ಕಾವ್ಯಾ ಹೊರಬಂದರು.
ಇನ್ನು ಇಡೀ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಷೋನಲ್ಲಿ ತಮ್ಮ ಜಗಳ, ಹಠ, ಛಲದಿಂದಲೇ ಭಾರಿ ಸದ್ದು ಮಾಡಿದ್ದ ಅಶ್ವಿನಿಗೌಡ ಟಾಪ್ 2ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅಶ್ವಿನಿಗೌಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ರಕ್ಷಿತಾ ಶೆಟ್ಟಿ ಟಾಪ್ 2ಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು. ಅಂತಿಮವಾಗಿ ಅಭಿಮಾನಿಗಳ ಹಾರೈಕೆಯಂತೆ ಗಿಲ್ಲಿನಟ ಚಾಂಪಿಯನ್ ಆದರು
ಗಿಲ್ಲಿ ಆಟ ಮೆಚ್ಚಿ 10 ಲಕ್ಷ ರೂ ಬಹುಮಾನ ಘೋಷಿಸಿದ ಕಿಚ್ಚಾ ಸುದೀಪ್
ಇನ್ನು ಗಿಲ್ಲಿ ನಟ ಅವರನ್ನು ವಿನ್ನರ್ ಎಂದು ಘೋಷಿಸಿದ ಬೆನ್ನಲ್ಲೇ ಕಾರ್ಯಕ್ರಮ ನಿರೂಪಕ ಕಿಚ್ಚಾ ಸುದೀಪ್ ವೇದಿಕೆ ಮೇಲಿಂದಲೇ ಗಿಲ್ಲಿ ಆಟ ಮೆಚ್ಚಿ ತಾವು ವೈಯುಕ್ತಿಕವಾಗಿ 10 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದು ವಿಶೇಷವಾಗಿತ್ತು.
ಬಿಗ್ ಬಾಸ್ ಧನಿ ಕೊನೆಗೂ ರಿವೀಲ್
ಇನ್ನು ಈ ಇಡೀ ಸೀಸನ್ ನಲ್ಲಿ ಸ್ಪರ್ಧಿಗಳ ನಿಯಂತ್ರಿಸುತ್ತಿದ್ದ ಬಿಗ್ ಬಾಸ್ ಅವರ ಧನಿ ಯಾರದ್ದು ಎಂದು ಈ ಹಿಂದೆ ಹಲವು ಬಾರಿ ಶೋಧಕಾರ್ಯಗಳು ನಡೆದಿದ್ದವಾದರೂ, ಈ ಪೈಕಿ ಬಿಗ್ ಬಾಸ್ ನಲ್ಲಿ ಆಗಾಗ ಬರುವ ಧನಿ ಅಂದರೆ ದಿನಾಂಕ ಮತ್ತು ಸಮಯ ಹೇಳುವ ದನಿ ನಿರೂಪಕ ಬಡಿಕೆಲ್ಲಾ ಪ್ರದೀಪ್ ಎಂಬುದು ತಿಳಿದಿತ್ತು.
ಆದರೆ ನಿಜವಾದ ಬಿಗ್ ಬಾಸ್ ಧನಿ ಯಾರದ್ದು ಎಂದು ತಿಳಿದಿರಲಿಲ್ಲ. ಇದೀಗ ಈ ಧನಿ ರಹಸ್ಯ ಬರೊಬ್ಬರಿ 12 ವರ್ಷಗಳ ಬಳಿಕ ಕೊನೆಗೂ ಬಯಲಾಗಿದೆ. ಆ ಧ್ವನಿ ಬೇರೆ ಯಾರದ್ದೂ ಅಲ್ಲ.. ಕನ್ನಡದ ಮಹಾಭಾರತದ 'ಶಕುನಿ' ಪಾತ್ರಕ್ಕೆ ಧ್ವನಿಯ ಮೂಲಕ ಜೀವ ತುಂಬಿದ್ದ ಬಹುಮುಖ ಪ್ರತಿಭೆ ಸುಮನ್ ಜಾದುಗಾರ್ ಅವರದ್ದು.
ಹೌದು.. ಈ ಬಗ್ಗೆ ಪತ್ರಕರ್ತ ಚಂದನ್ ಶರ್ಮಾ ಅವರು ಪೋಸ್ಟ್ ಮಾಡಿದ್ದು, ಪೋಸ್ಟ್ ನಲ್ಲಿ, 'ಒಬ್ಬ ಪತ್ರಕರ್ತನಾಗಿ ನನಗಿದು ಮೊದಲೇ ತಿಳಿದಿದ್ದರೂ, ಕಾರ್ಯಕ್ರಮದ ಕುತೂಹಲ ಕೆಡಿಸಬಾರದು ಎಂಬ ಕಾರಣಕ್ಕೆ ಸೀಸನ್ ಮುಗಿಯುವವರೆಗೂ ಕಾಯುತ್ತಿದ್ದೆ.
ಬಿಗ್ ಬಾಸ್ ಮನೆಯಿಂದ ಸ್ಪರ್ಧಿಯಾಗಿ ಭಾಗವಹಿಸಲು ನನಗೆ ಹಲವು ಬಾರಿ ಆಹ್ವಾನ ಬಂದಿದ್ದರೂ, ವೃತ್ತಿ ಬದುಕಿನ ಜವಾಬ್ದಾರಿಗಳಿಂದ ದೂರ ಉಳಿದಿದ್ದೆ. ನನಗೆ ಆ ಕಾರ್ಯಕ್ರಮದ ಬಗ್ಗೆ ಅಪಾರ ಗೌರವವಿದೆ. ಆದರೆ ತೆರೆಯ ಹಿಂದೆ ನಿಂತು ಶೋ ಯಶಸ್ವಿಗೊಳಿಸುವ ಇಂತಹ ಅದ್ಭುತ ಕಲಾವಿದರ ಪರಿಚಯ ಜನರಿಗೆ ಆಗಲೇಬೇಕು.' ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಅದೇ ಪೋಸ್ಟ್ ನಲ್ಲಿ ಸುಮನ್ ಜಾದುಗಾರ್ ಅವರ ಹಿನ್ನಲೆ ಧ್ವನಿ ನೀಡುತ್ತಿರುವ ವಿಡಿಯೋವೊಂದನ್ನು ಕೂಡ ಹಂಚಿಕೊಂಡಿದ್ದಾರೆ. ಆ ಮೂಲಕ ಬಿಗ್ ಬಾಸ್ ಅಭಿಮಾನಿಗಳ 12 ವರ್ಷಗಳ ಪ್ರಶ್ನೆಗೆ ಮತ್ತು ಬಿಗ್ ಬಾಸ್ ಧನಿಯ 12 ವರ್ಷಗಳ ರಹಸ್ಯವನ್ನು ಕೊನೆಗೂ ರಿವೀಲ್ ಮಾಡಿದ್ದಾರೆ.