ಬೆಂಗಳೂರು: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (AR Rahman) ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರೋಧ್ಯಮದಲ್ಲಿ ಕೋಮುಭಾವನೆ ಹೆಚ್ಚಾಗುತ್ತಿರುವ ಹಿನ್ನಲೆ ತಮಗೆ ಕೆಲಸದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೇ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ರೆಹಮಾನ್ ಗೆ ನಟ ಕಿಶೋರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಿಶೋರ್, ಅಸಂವೈಧಾನಿಕವಾದರೂ ಕೂಡ ಜಾತಿ, ಭಾಷೆ, ದೇಶ, ಧರ್ಮಗಳ ತಾರತಮ್ಯ ಮಾಡದ ಸಂತರು ನಾವೆಂದುಕೊಂಡರೆ ನಾವು ಅತಿ ಸುಳ್ಳರೋ ಇಲ್ಲ ಅತಿ ಮೂರ್ಖರೋ ಆಗಿರಲೇಬೇಕು. ರೆಹಮಾನ್ ಸರ್, ಕ್ಷಮಿಸಿ. ನಿಮ್ಮನ್ನು ದೇಶಪ್ರೇಮ ಸಾಬೀತು ಮಾಡಬೇಕಾದ ಹಂತಕ್ಕೆ ನೂಕಿದ್ದಕ್ಕೆ.. ನಿಮ್ಮ ಅನುಭವ, ನೋವು ಅದರ ಬಗ್ಗೆ ಅದರ ಪರಿಹಾರದ ಬಗ್ಗೆ ನಾವು ಒಂದು ಕ್ಷಣವಾದರೂ ನಿಂತು ಯೋಚಿಸಬೇಕಿತ್ತು, ಚರ್ಚಿಸಬೇಕಿತ್ತು.
ನಿಮ್ಮ ಅನುಭವ ವೈಯುಕ್ತಿಕವೇ ಆಗಿದ್ದರೂ, ಅದರಿಂದ ದೇಶದ ಅಲ್ಪಸಂಖ್ಯಾತರು ಇಂದು ಎದುರಿಸುತ್ತಿರುವ ಅಸುರಕ್ಷಿತತೆಯ ಸಂಕಟದ ದೊಡ್ಡ ಸಮಸ್ಯೆ ಸುಳ್ಳಾಗುವುದಿಲ್ಲವಲ್ಲ. ಆದರೆ ಬರೀ ಧರ್ಮದ ಆಧಾರದಲ್ಲಿ ದ್ವೇಷದ ವಿಷ ಕಕ್ಕಿ ಅಧಿಕಾರ ಹಿಡಿದಿರುವ ನಮ್ಮ ಇಂದಿನ ನಾನ್ ಬಯಲಾಜಿಕಲ್ ನ ಭಾರತದಲ್ಲಿ ದೇಶ ಮತ್ತು ದೇಶಪ್ರೇಮದ ಕಲ್ಪನೆಯೇ ಮೂರ್ಖತನದ ಪರಮಾವಧಿ ತಲುಪಿಬಿಟ್ಟಿದೆ.
ನಮಗೆ ಒಂದು ದಿನ ಅಡಾಣಿ ದೇಶವಾದರೆ ಒಂದು ದಿನ ಮೋದಿ ದೇಶ . ಒಂದು ದಿನ ಕ್ರಿಕೆಟ್ ದೇಶವಾದರೆ ಒಂದು ದಿನ ಧರ್ಮವೇ ದೇಶ. ಹಾಗಾಗಿ ಇಂದಿನ ನಮ್ಮ ವಿಶ್ವಗುರು ಭಾರತದಲ್ಲಿ ನಮ್ಮ ದೇಶದ ಸಮಸ್ಯೆಗಳ ಬಗ್ಗೆ ದನಿಯೆತ್ತುವುದೇ ದೇಶದ್ರೋಹ. ಅದೂ ಇಂದಿನ ಇಂಟರ್ನೆಟ್ ಯುಗದಲ್ಲಿ ಹೊರನಾಡಿನಲ್ಲಿ ಹೋಗಿ ಮಾತಾಡಿದರಂತೂ ಮುಗಿಯಿತು.
ಏನೇ ಆದರೂ ಗಾಂಧಿಯನ್ನೇ ಕೊಂದು ಸೋನಮ್ ವಾಂಗ್ಚುಕ್ ರಂಥ ವಿಜ್ಞಾನಿಯನ್ನೂ ಜೈಲಿಗಟ್ಟಿದ , ಹಾವಾಡಿಗರ ದೇಶವೆಂಬ ಪಾಶ್ಚಾತ್ಯರ ಪುರಾತನ ಕಲ್ಪನೆಯನ್ನು ನಿಜಮಾಡಲು ಹೊರಟಿರುವ ನಮ್ಮಂಥ ಅಮಾಯಕ ಮೂರ್ಖರಿಗೆ ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ ಎಂದು ಬರೆದುಕೊಂಡಿದ್ದಾರೆ.