ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಉದ್ಘಾಟಿಸಿದರು.
ಇಂದು ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಚಾಲನೆ ನೀಡಿದರು.
ನಂತರ ಪಿಟೀಲು ವಾದಕಿ ಜ್ಯೋತ್ಸ್ನಾ ಶ್ರೀಕಾಂತ್ ನೇತೃತ್ವದಲ್ಲಿ "ವಿಶ್ವ ಸಂಗೀತ ಸಂಭ್ರಮ" ನಡೆಯಿತು. ಖ್ಯಾತ ನಟ ಪ್ರಕಾಶ್ ರಾಜ್, ನಟಿ ರುಕ್ಮಿಣಿ ವಸಂತ್ ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
'ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ' ಸ್ತ್ರೀ ಎಂದರೆ ಅಷ್ಟೇ ಸಾಕೆ ' ಎಂಬ ಜಿಎಸ್‌ಎಸ್ ಅವರ ಕವನದ ಸಾಲಿನೊಂದಿಗೆ 'ಸ್ತ್ರೀ ಸಂವೇದನೆ ಮತ್ತು ಸಮಾನತೆ ದನಿ' ಎಂಬ ಟ್ಯಾಗ್‌ಲೈನ್ ಹೊಂದಿರುವ ಧ್ಯೇಯ ವಾಕ್ಯದೊಂದಿಗೆ ಮಹಿಳಾ ಪ್ರಧಾನ ಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.
ಅಧಿಕಾರಿಗಳ ಪ್ರಕಾರ, ನೆದರ್ಲ್ಯಾಂಡ್ಸ್ ಚಲನಚಿತ್ರ ಫೋರ್ಟ್ ಬ್ಯಾಗೇಜ್ ಅನ್ನು ಆರಂಭಿಕ ಚಿತ್ರವಾಗಿ ಪ್ರದರ್ಶಿಸಲಾಗುತ್ತಿದೆ.
ಇಂದಿನಿಂದ ಫೆಬ್ರವರಿ 6ರವರೆಗೂ ಚಲನಚಿತ್ರೋತ್ಸವ ನಡೆಯಲಿದೆ. ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗಲಿದೆ.