ಪ್ರಜ್ವಲ್ ದೇವರಾಜ್ 
ಸಿನಿಮಾ ಸುದ್ದಿ

'ಕರಾವಳಿ' ವಿವಾದ: ಸುದೀರ್ಘ ಪೋಸ್ಟ್ ಹಾಕಿ, ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್ ಹಂಚಿಕೊಂಡ ಪ್ರಜ್ವಲ್ ದೇವರಾಜ್!

ನಿನ್ನೆ ವಿವಾದದ ಬಗ್ಗೆ ಸ್ವತಃ ಗುರುದತ್ ಗಾಣಿಗ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದರು. ಇದೀಗ, ಪ್ರಜ್ವಲ್ ದೇವರಾಜ್ ಅವರು ಸಹ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು: ಬಿಡುಗಡೆಗೆ ಸಿದ್ಧವಾಗಿರುವ 'ಕರಾವಳಿ' ಸಿನಿಮಾ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಸಿನಿಮಾಗೆ ಸಂಬಂಧಿಸಿದಂತೆ ಬಹಳಷ್ಟು ಚರ್ಚೆಗಳು ಕೂಡಾ ನಡೆಯುತ್ತಿವೆ.

ಸಂಭಾವನೆ ವಿಚಾರವಾಗಿ ನಾಯಕ ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ-ನಿರ್ಮಾಪಕ ಗುರುದತ್ ಗಾಣಿಗ ಅವರ ನಡುವೆ ಮನಸ್ತಾಪ ಉಂಟಾಗಿದೆ. ನಿನ್ನೆ ವಿವಾದದ ಬಗ್ಗೆ ಸ್ವತಃ ಗುರುದತ್ ಗಾಣಿಗ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದರು. ಇದೀಗ, ಪ್ರಜ್ವಲ್ ದೇವರಾಜ್ ಅವರು ಸಹ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.

ಪ್ರಜ್ವಲ್ ದೇವರಾಜ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅಲ್ಲದೆ ನಿರ್ದೇಶಕ ಗುರುದತ್ ಗಾಣಿಗ ಅವರ ಜೊತೆಗಿನ ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್ ಅನ್ನು ಸಹ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ವಾಟ್ಸಾಪ್ ಚಾಟಿಂಗ್ ಸ್ಕ್ರೀನ್

ಪ್ರಜ್ವಲ್ ಪೋಸ್ಟ್​ನಲ್ಲಿ ಏನಿದೆ?

ಇತ್ತೀಚಿನ ದಿನಗಳಲ್ಲಿ "ಕರಾವಳಿ' ಚಿತ್ರದ ನಿರ್ಮಾಣ ಸಂಸ್ಥೆ ಗುರುದತ್ ಗಣಿಗ ಫಿಲ್ಮ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಅವರಿಂದ ಸಾರ್ವಜನಿಕವಾಗಿ ನೀಡಲಾಗುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ, ನನ್ನ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳ ಮುಂದೆ ಕೆಲವು ವಾಸ್ತವಾಂಶಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ.

"ಕರಾವಳಿ' ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ, ಯಾವುದೇ ಪೂರ್ವ ಮಾಹಿತಿ, ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ನನಗೆ ತಿಳಿಯಿತು. ಅದೇ ಸಮಯದಲ್ಲಿ, ನನಗೆ ಒಪ್ಪಿಗೆಯಾದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ನಾನು ಟ್ರೈಲ‌ರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

ಇದರ ನಂತರ, ಗುರುದತ್ ಗಣಿಗ ಫಿಲ್ಡ್ ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರು ಈ ವಿವಾದಕ್ಕೆ ನನ್ನ ದೈಹಿಕ ರೂಪಾಂತರ ಅಥವಾ ಸಿಕ್ಸ್-ಪ್ಯಾಕ್ ಲುಕ್ ಕಾರಣ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳು ನನ್ನ ಗಮನಕ್ಕೆ ಬಂದಿವೆ. ಈ ಕುರಿತು ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ಈ ವಿಷಯಕ್ಕೆ ನನ್ನ ದೈಹಿಕ ರೂಪಾಂತರದೊಂದಿಗೆ ಯಾವುದೇ ಸಂಬಂಧವಿಲ್ಲ. ನನ್ನ ಯಾವುದೇ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿರುವುದು ಹಾಗೂ ಆ ಸಂದರ್ಭದಲ್ಲಿ ನನ್ನ ಸಂಭಾವನೆ ಸಂಪೂರ್ಣವಾಗಿ ಪಾವತಿಯಾಗಿರದಿರುವುದೇ ಈ ವಿಷಯದ ಮೂಲ ಕಾರಣಗಳಾಗಿವೆ.

ಮೊದಲ ದಿನದಿಂದಲೂ ನನ್ನ ನಿಲುವು ಒಂದೇ ಆಗಿತ್ತು. ನನಗೆ ಬಾಕಿ ಇರುವ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ ತಕ್ಷಣ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಲು ಹಾಗೂ ಚಿತ್ರದ ಪ್ರಚಾರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನಾನು ಸಿದ್ಧನಿದ್ದೇನೆ ಎಂದು ಸಂಬಂಧಪಟ್ಟವರಿಗೆ ಸ್ಪಷ್ಟವಾಗಿ ತಿಳಿಸಿದ್ದೆ.

ಟ್ರೈಲ‌ರ್ ಬಿಡುಗಡೆಯಾದ ಮರುದಿನ, ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ನನ್ನ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು. ಅದರ ನಂತರ, ಗುರುದತ್ ಗಣಿಗ ಫಿಲ್ಮ್ ವತಿಯಿಂದ ನನ್ನ ವ್ಯವಸ್ಥಾಪಕರಿಗೆ ನನ್ನ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪ್ರಚಾರದಲ್ಲಿ ನನ್ನ ಭಾಗವಹಿಸುವಿಕೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಹೀಗಾಗಿ, ಚಿತ್ರದ ಡಬ್ಬಿಂಗ್ ಹಾಗೂ ಪ್ರಚಾರದಲ್ಲಿ ನಾನು ಭಾಗವಹಿಸದಿರುವುದು ನನ್ನ ನಿರ್ಧಾರವಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.

ಇದರ ಜೊತೆಗೆ ನನ್ನ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ರೀತಿಯ ಸಾರ್ವಜನಿಕ ಹೇಳಿಕೆಗಳೂ ನನ್ನ ಗಮನಕ್ಕೆ ಬಂದಿವೆ. ಆದರೆ, ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಅವಕಾಶವನ್ನು ನನಗೆ ನೀಡದೇ, ಅಂತಹ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿರುವುದು ನನಗೆ ಸಹಜವಾಗಿಯೇ ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವ, ವಿಶ್ವಾಸ ಮತ್ತು ಪ್ರೇಕ್ಷಕರ ಪ್ರೀತಿಯನ್ನು ನಾನು ಅತ್ಯಂತ ಅಮೂಲ್ಯವಾಗಿ ಪರಿಗಣಿಸುತ್ತೇನೆ. ಆದ್ದರಿಂದ ಈ ಬೆಳವಣಿಗೆಗಳು ನನಗೆ ವೈಯಕ್ತಿಕವಾಗಿಯೂ ಹಾಗೂ ವೃತ್ತಿಪರವಾಗಿಯೂ ಬೇಸರವನ್ನುಂಟು ಮಾಡಿವೆ.

ಈ ಹೇಳಿಕೆಯ ಮೂಲಕ ನನ್ನ ನಿಲುವನ್ನು ಸಾರ್ವಜನಿಕರ ಮುಂದೆ ಸ್ಪಷ್ಟಪಡಿಸುವ ಉದ್ದೇಶ ಮಾತ್ರ ನನ್ನದು. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನಿಂದ ಸಾರ್ವಜನಿಕವಾಗಿ ನಡೆಯುವ ಯಾವುದೇ ಚರ್ಚೆ, ಪ್ರತಿಕ್ರಿಯೆ ಅಥವಾ ವಾಗ್ವಾದಕ್ಕೆ ಇಲ್ಲಿಯೇ ಪೂರ್ಣ ವಿರಾಮ ಹಾಕುತ್ತಿದ್ದೇನೆ. ಇನ್ನು ಮುಂದೆ ಈ ವಿಷಯದ ಕುರಿತು ನಾನು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡುವುದಿಲ್ಲ.

ಒಬ್ಬ ಕಲಾವಿದನಾಗಿ ನನ್ನ ಮೊದಲ ಆದ್ಯತೆ ಯಾವಾಗಲೂ ಕನ್ನಡ ಸಿನಿಮಾ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಇಡೀ ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂಬುದು ನನ್ನ ದೃಢ ನಂಬಿಕೆ.

ಆದ್ದರಿಂದ, "ಕರಾವಳಿ ಚಿತ್ರದ ಸಂಪೂರ್ಣ ತಂಡಕ್ಕೆ ನನ್ನ ಹೃತೂರ್ವಕ ಶುಭಹಾರೈಕೆಗಳನ್ನು ತಿಳಿಸುತ್ತೇನೆ. ನನ್ನ ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸಿ. ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಹಾಗೂ ಸಿಬ್ಬಂದಿಯನ್ನು ಪ್ರೋತ್ಸಾಹಿಸುವಂತೆ ಹೃತ್ತೂರ್ವಕವಾಗಿ ವಿನಂತಿಸುತ್ತೇನೆ.

ಈ ಕಷ್ಟದ ಸಮಯದಲ್ಲೂ ನನ್ನೊಂದಿಗೆ ನಿಂತು ಪ್ರೀತಿ. ವಿಶ್ವಾಸ ಮತ್ತು ಬೆಂಬಲ ವ್ಯಕ್ತಪಡಿಸಿದ ನನ್ನ ಅಭಿಮಾನಿಗಳು ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನ್ನ ದೊಡ್ಡ ಶಕ್ತಿ ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು; Video

HMT ಆದಾಗ ನಾನು ಹುಟ್ಟಿರ್ಲಿಲ್ಲ, ನೀವೇನು? ಅರಣ್ಯ ಭೂಮಿ ಅಂತ ದಾಖಲೆ ತೋರಿಸಿ ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಟಾಂಗ್

INS Mahendragiri: ಪ್ರಾಜೆಕ್ಟ್ 17A; ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ; Video

ಜೈಪುರ ಮಹಿಳೆ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ತಾಯಿಗೂ ಮೊದಲೇ ತಂದೆಯನ್ನೂ ಕೊಂದಿದ್ದಳೇ ಹಂತಕ ಪುತ್ರಿ? ಸೋದರಮಾವ ಹೇಳಿದ್ದೇನು?

ಸರ್ಕಾರ ಉರುಳಿಸಲು BJP ಕುದುರೆ ವ್ಯಾಪಾರ; ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ರೂ ಆಫರ್: ಸಿಎಂ ಒಮರ್ ಅಬ್ದುಲ್ಲಾ ಆರೋಪ