ಬೆಂಗಳೂರು: ನಟಿ ಕೃಷಿ ತಾಪಂಡ ವಾಸವಿದ್ದ ಅಪಾರ್ಟ್ಮೆಂಟ್ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದು, ನಟಿಯ ವಿರುದ್ಧ ಹಲವು ರೀತಿಯ ಊಹಾಪೋಹಗಳು ಕೇಳಿಬರುತ್ತಿವೆ. ಈ ಎಲ್ಲ ಬೆಳವಣಿಗೆಗಳ ಬಳಿಕ ನಟಿ ಕೃಷಿ ತಾಪಂಡ ಅವರೇ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, 'ನಾನು ಈ ರೀತಿ ಬರೆಯಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಅಲ್ಲದೇ ಈ ವಿಷಯವನ್ನ ಜಗತ್ತಿಗೆ ತಿಳಿಸಲು ನನ್ನಲ್ಲಿ ಮತ್ತು ಮಾನಸಿಕ ಶಕ್ತಿಯೂ ಇಲ್ಲ. ಇಂತಹ ಸಮಯದಲ್ಲಿ ನನ್ನ ಮುಂದಿರುವ ಒಂದೇ ಒಂದು ಆಯ್ಕೆಯೆಂದರೆ ಸಾರ್ವಜನಿಕ ಹೇಳಿಕೆ ನೀಡುವುದು' ಎಂದಿದ್ದಾರೆ.
'ಊಹಿಸಲು ಸಾಧ್ಯವಿಲ್ಲದಂತಹ ನಷ್ಟದ ಈ ಸಮಯದಲ್ಲಿ ನಾನು, ನನ್ನ ಸ್ನೇಹಿತರು ಹಾಗೂ ನನ್ನ ಕುಟುಂಬ ಸದಸ್ಯರ ಮೇಲೆ ಅಪಾರ ಒತ್ತಡ, ನಿರಂತರ ಊಹಾಪೋಹಗಳು ಮತ್ತು ಪದೇ ಪದೆ ಕೇಳಲಾಗುತ್ತಿರುವ ಪ್ರಶ್ನೆಗಳಿಂದಾಗಿ ನಾನು ಈಗ ಈ ಕೆಲಸ ಮಾಡಲೇಬೇಕಾಗಿದೆ. ಕಳೆದ ಕೆಲ ದಿನಗಳಲ್ಲಿ ನಾನು ಊಹಿಸದ ರೀತಿಯಲ್ಲಿ ಕೆಲವು ಘಟನೆಗಳು ನನ್ನ ಜೀವನವನ್ನು ಬದಲಿಸಿವೆ. ಜೊತೆಗೆ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ, ನನ್ನ ಕಾಳಜಿ ಮಾಡುತ್ತಿದ್ದ ಮತ್ತು ನಿಷ್ಕಲ್ಮಷ ಮನಸ್ಸಿನಿಂದ ನನ್ನೊಂದಿಗೆ ನಿಂತಿದ್ದ ವ್ಯಕ್ತಿಯೊಬ್ಬರನ್ನ ನಾನು ಕಳೆದುಕೊಂಡಿದ್ದೇನೆ. ಅವರನ್ನು ಕಳೆದುಕೊಂಡಿರುವ ನೋವನ್ನು ಕೇವಲ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾನು ಮತ್ತೆ ಸಹಜ ಸ್ಥಿತಿಗೆ ಮರಳಲು ಸಾಧ್ಯವೇ ಎಂಬು ಸಹ ನನಗೆ ತಿಳಿಯುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ.
'ಬಹಳ ಸಮಯದಿಂದ ನಾನು ನೋವನ್ನು ಹೊತ್ತುಕೊಂಡೇ ಸಾಗುತ್ತಿದ್ದೇನೆ. ಇದೀಗ ಮತ್ತೊಂದು ಊಹಿಸಲೂ ಸಾಧ್ಯವಾಗದ ನಷ್ಟದಿಂದ ದುಃಖಿತಳಾಗಿದ್ದೇನೆ. ನನ್ನೇ ನಾನು ಕಳೆದುಕೊಂಡಂತೆ ಆಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿ ಪಾತ್ರರು ಇದೀಗ ಆ ನಷ್ಟವನ್ನು ಸಹಿಸಿಕೊಳ್ಳಲು ನೋಡುತ್ತಿರುವಾಗ ನಿರಂತರ ವದಂತಿ, ಊಹಾಪೋಹಗಳು, ಯಾರದ್ದೋ ಒಬ್ಬರ ಸಾವನ್ನು ಕಥೆಯನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಮಾಧ್ಯಮಗಳು ಇದನ್ನು ಅರ್ಥ ಮಾಡಿಕೊಂಡಿವೆ ಮತ್ತು ಸಹಕರಿಸಿವೆ. ಇನ್ನೂ ಕೆಲವರು ಈ ಪ್ರಚೋದಿಸುತ್ತಿದ್ದಾರೆ. ನೀವು ಹೇಗಿದ್ದೀರಿ ಎಂದು ಕೇಳುವ ಬದಲು ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಲಾಗುತ್ತಿದೆ' ಎಂದಿದ್ದಾರೆ.
ಯಾವುದೋ ಒಬ್ಬ ವ್ಯಕ್ತಿ ಅಥವಾ ಯಾವುದೋ ಒಂದು ವೇದಿಕೆಯನ್ನು ಉದ್ದೇಶಿಸಿ ನಾನು ಇದನ್ನು ಹೇಳುತ್ತಿಲ್ಲ. ಬದಲಿಗೆ ಸತ್ಯವನ್ನು ತಿಳಿಯದೆ ಅಥವಾ ತಮ್ಮಿಂದಾಗಿ ಇತರರ ಮೇಲೆ ಬೀರುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿಯದೆ ಮಾತನಾಡುವವರಿಗೆ ಹೇಳುತ್ತಿದ್ದೇನೆ. ಯಾವುದೇ ದುಃಖಿತ ವ್ಯಕ್ತಿಯು ತಮ್ಮ ನೋವನ್ನ ಸಮರ್ಥಿಸಿಕೊಳ್ಳಬೇಕೆಂದು ಎಂದಿಗೂ ನಿರೀಕ್ಷಿಸಬಾರದು. ನನಗಾಗಿ ಪ್ರಾರ್ಥಿಸುತ್ತಿರುವ, ನನ್ನನ್ನು ಸಂಪರ್ಕಿಸುತ್ತಿರುವ, ನನ್ನ ಸ್ನೇಹಿತರ ಮೂಲಕ ತಲುಪುತ್ತಿರುವ ಮತ್ತು ಆಶೀರ್ವಾದಿಂದ ಕೂಡಿದ ಸಂದೇಶ ಕಳುಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನಗೆ ಈಗ ಪ್ರತಿಕ್ರಿಯಿಸಲು ಶಕ್ತಿ ಇಲ್ಲದಿರಬಹುದು, ಆದರೆ ನಿಮ್ಮ ಪ್ರೀತಿ ನನ್ನ ಮೇಲೆ ಅಪಾರವಾಗಿರುವುದನ್ನ ನೋಡುತ್ತಿದ್ದೇನೆ. ಅದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ ಎಂದು ನಟಿ ಬರೆದಿದ್ದಾರೆ.
ವದಂತಿಗಳನ್ನು ಹಬ್ಬಿಸುತ್ತಿರುವವರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಆತನ ಕುಟುಂಬ, ನನ್ನ ಕುಟುಂಬ ಮತ್ತು ನಮ್ಮ ಸ್ನೇಹಿತರಿಗೆ ತೊಂದರೆ ನೀಡಬೇಡಿ. ಯಾರದ್ದೋ ಸಾವನ್ನು ಮನರಂಜನೆಯ ವಿಚಾರವಾಗಿ ಮಾಡಬೇಡಿ. ದಯವಿಟ್ಟು ಅವರ ಅಗಲಿಕೆಗೆ ಶಾಂತಿಯಿಂದ ದುಃಖಿಸಲು ಕನಿಷ್ಠ ಗೌರವ ಮತ್ತು ಗೌಪ್ಯತೆಯನ್ನು ನೀಡಿ. ಅನಗತ್ಯ ವದಂತಿ ಮತ್ತು ಪ್ರಶ್ನೆಗಳನ್ನು ನಿಲ್ಲಿಸಿ. ನಿಮಗೆ ಯಾರನ್ನಾದರೂ ನಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರ ಕಣ್ಣೀರಿಗೆ ಕಾರಣವಾಗಬೇಡಿ. ಯಾರಿಗಾದರೂ ಬದುಕಲು ಅವಕಾಶ ನೀಡಿ, ಕನಿಷ್ಠ ಅವರು ಜೀವನದ ಮೇಲಿನ ಭರವಸೆ ಕಳೆದುಕೊಳ್ಳಲು ಕಾರಣವಾಗಬೇಡಿ ಎಂದು ನಟಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.