ಮನೋಜ್ ಕುಮಾರ್ ನಿರ್ದೇಶನದಲ್ಲಿ ಶ್ರೀ ರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ನಟಿಸಿರುವ ಕಡಿಮೆ ಬಜೆಟ್‌ನ ಪ್ರೇಮಕಥಾ ಚಿತ್ರ ಪ್ರೇಮದ ಊರಲಿ ಪ್ರದರ್ಶನ ಕರ್ನಾಟಕದಾದ್ಯಂತ ಚಿತ್ರಪ್ರೇಮಿಗಳಿಂದ ಪ್ರಶಸಂಸೆಯ ಮಾತುಗಳನ್ನು ಕೇಳಿ ಮೂರನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾದ ಚಿತ್ರಕ್ಕೆ 14 ದಿನಗಳಲ್ಲಿ 11.1 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ.
ಇಂದಿಗೆ ಲೆಕ್ಕ ತೆಗೆದುಕೊಂಡರೆ ಚಿತ್ರವು ಇದುವರೆಗಿನ ಅತ್ಯಧಿಕ ಒಂದೇ ದಿನದ ಮುಂಗಡ ಟಿಕೆಟ್ ಮಾರಾಟ ದಾಖಲಿಸಿದೆ. 1,141 ಪ್ರದರ್ಶನಗಳ ಮೂಲಕ ಒಟ್ಟು ₹1.57 ಕೋಟಿ ಮೊತ್ತದ ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿದ್ದು, 73,632 ಟಿಕೆಟ್‌ಗಳು ಮಾರಾಟವಾಗಿವೆ. ಆಸನಗಳ ಭರ್ತಿ ಪ್ರಮಾಣ ಶೇ.20ರಷ್ಟಿದೆ. ಚಿತ್ರವು ಪ್ರೇಕ್ಷಕರಿಂದ 10ಕ್ಕೆ 9.6ರಷ್ಟು ಅತ್ಯುತ್ತಮ ರೇಟಿಂಗ್ ಪಡೆದಿದೆ.
ಕೇವಲ 2 ರಿಂದ ಮೂರು ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವು ಸಣ್ಣ ಪಟ್ಟಣಗಳ ಸಿಂಗಲ್‌ಸ್ಕ್ರೀನ್ ಚಿತ್ರಮಂದಿರಗಳಿಗೆ ಮತ್ತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮತ್ತೆ ಮತ್ತೆ ಚಿತ್ರ ವೀಕ್ಷಿಸಲು ಬರುತ್ತಿರುವ ಪ್ರೇಕ್ಷಕರಿಂದಾಗಿ ಬೇಡಿಕೆ ಹೆಚ್ಚಿದ್ದು, 15ನೇ ದಿನ ಬೆಂಗಳೂರಿನಲ್ಲಿ ಪ್ರದರ್ಶನಗಳ ಸಂಖ್ಯೆಯನ್ನು 678ಕ್ಕೆ ಹೆಚ್ಚಿಸಲಾಗಿದೆ. ಇದೇ ವೇಳೆ, ವಿದೇಶಗಳಲ್ಲಿಯೂ ಚಿತ್ರದ ಪ್ರದರ್ಶನಗಳು ಆರಂಭವಾಗುತ್ತಿರುವುದು ಚಿತ್ರ ತಂಡಕ್ಕೆ ಮತ್ತಷ್ಟು ಖುಷಿ ಕೊಟ್ಟಿದೆ.