ಬೆಂಗಳೂರು: ನಟ ದರ್ಶನ್ ತೂಗುದೀಪ ಅವರು ತಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತಮ್ಮ ಆಪ್ತ ಹಾಗೂ ನಟ ಧನ್ವೀರ್ ಗೌಡ ವಿರುದ್ಧ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ! ಜೈಲಿನಲ್ಲಿರುವ ವೇಳೆ, ತಮ್ಮ ಕುಟುಂಬ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಧನ್ವೀರ್ ನಾಲಿಗೆ ಹರಿಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ದರ್ಶನ್, ಕಾನೂನು ಸಮರದ ಮೂಲಕವೇ ಅನಗತ್ಯ ಮಾತುಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ವಿವಾದದ ಮೂಲವೇನು?
ನಟ ದರ್ಶನ್ ಜೈಲಿನಲ್ಲಿದ್ದಾಗ ಅವರ ಕೋರ್ಟ್ ವೆಚ್ಚ ಹಾಗೂ ಇತರ ಕಾನೂನು ಪ್ರಕ್ರಿಯೆಗಳಿಗಾಗಿ ಹಣ ಸಂಗ್ರಹಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ₹10 ಕೋಟಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಪ್ತರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಜೊತೆಗೆ, ಇತ್ತೀಚೆಗೆ ಧನ್ವೀರ್ ಅವರ ಆಪ್ತರದ್ದು ಎನ್ನಲಾದ ಆಡಿಯೋ ತುಣುಕುಗಳು ವೈರಲ್ ಆಗಿದ್ದು, ಅದರಲ್ಲಿ ದರ್ಶನ್ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬಂತಹ ಮಾತುಗಳಿದ್ದವು. ಮತ್ತೊಂದೆಡೆ, ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರು ತಮಗೆ ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರ್.ಆರ್. ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಜೈಲಿನಿಂದಲೇ ದರ್ಶನ್ ಖಡಕ್ ಎಚ್ಚರಿಕೆ!
ಅಕ್ಟೋಬರ್ 27ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಝೈದ್ ಖಾನ್ ಜೈಲಿಗೆ ಭೇಟಿ ನೀಡಿ ಈ ಎಲ್ಲ ಬೆಳವಣಿಗೆಗಳನ್ನು ದರ್ಶನ್ ಗಮನಕ್ಕೆ ತಂದಿದ್ದರು. ಇದರಿಂದ ತೀವ್ರ ಕೆರಳಿದ ದರ್ಶನ್, "ನಾನು ಜೈಲಿನ ಒಳಗಿರುವಾಗ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತನಾಡಲು ಇವನ್ಯಾರು? ದಮ್ಮು, ತಾಕತ್ ಇದ್ದರೆ ನಾನು ಹೊರಗೆ ಬಂದ ಮೇಲೆ ನನ್ನ ಮುಂದೆ ಮಾತನಾಡಲಿ" ಎಂದು ಝೈದ್ ಖಾನ್ ಮೂಲಕ ಕಟುವಾದ ಸಂದೇಶ ರವಾನಿಸಿದ್ದರು. ಅದರಲ್ಲೂ, ಧನ್ವೀರ್ ಅವರ ಹೇಳಿಕೆಗಳಿಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುತ್ತಾ ಹೋದರೆ ವಿವಾದ ದೊಡ್ಡದಾಗುತ್ತದೆ ಮತ್ತು ಅಭಿಮಾನಿಗಳಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದನ್ನು ಅರಿತ ದರ್ಶನ್, ಮಾತು ಬೆಳೆಸುವ ಬದಲು ಕಾನೂನಿನ ಮೂಲಕವೇ ಕಡಿವಾಣ ಹಾಕಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದರಂತೆ, ಧನ್ವೀರ್ ವಿರುದ್ಧ ಈಗಾಗಲೇ ಪೊಲೀಸ್ ದೂರುಗಳು ದಾಖಲಾಗಿದ್ದರೂ, ಅವರು ಮಾಧ್ಯಮಗಳಲ್ಲಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ದರ್ಶನ್, ಅವರ ಪತ್ನಿ ಮತ್ತು ಮಗನ ಹೆಸರನ್ನು ಬಳಸಿ ಯಾವುದೇ ಸುಳ್ಳು ಅಥವಾ ನಿಂದನಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ಬಂಧಿಸಲು ಈ ಕಾನೂನಾತ್ಮಕ ತಡೆಯಾಜ್ಞೆ ತರಲಾಗುತ್ತಿದೆ ಎನ್ನಲಾಗಿದೆ.