ಅನುಪಮಾ ಪರಮೇಶ್ವರನ್ 
ಸಿನಿಮಾ ಸುದ್ದಿ

ಕೇವಲ ಹಣಕ್ಕಾಗಿ ಚಿತ್ರಗಳಿಗೆ ಸಹಿ ಹಾಕಲು ನಾನು ಬಯಸುವುದಿಲ್ಲ: ನಟಿ ಅನುಪಮಾ ಪರಮೇಶ್ವರನ್

'ನಾನೊಬ್ಬ ಬಹುಮುಖಿ ನಟಿಯಾಗಬೇಕೆಂಬುದು ಯಾವಾಗಲೂ ನನ್ನ ಗುರಿಯಾಗಿದೆ. ಒಂದೇ ಪ್ರಕಾರದ ಚಿತ್ರಗಳಲ್ಲಿ ನಟಿಸುತ್ತಾ ಹೋದರೆ ಅದು ನನಗೆ ಬೇಸರ ತರಿಸುತ್ತದೆ. ಅದಕ್ಕಾಗಿಯೇ ನಾನು 'ಟಿಲ್ಲು ಸ್ಕ್ವೇರ್', 'ಪರದ' ಮತ್ತು 'ಕ್ರೇಜಿ ಕಲ್ಯಾಣಂ'ನಂತಹ ಚಿತ್ರಗಳಲ್ಲಿ ನಟಿಸಿದೆ' ಎಂದರು.

ಅನುಪಮಾ ಪರಮೇಶ್ವರನ್ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಬ್ಯುಸಿಯಾದ ನಟಿಯರಲ್ಲಿ ಒಬ್ಬರು; ಅವರು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಕೆಲವು ಚಿತ್ರಗಳಲ್ಲಿ ಏಕಕಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಇತ್ತೀಚಿನ ತೆಲುಗು ಚಿತ್ರ 'ಕ್ರೇಜಿ ಕಲ್ಯಾಣಂ' ಕಮರ್ಷಿಯಲ್ ಸಕ್ಸಸ್ ಕಾಣದಿದ್ದರೂ, ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಅನುಪಮಾ ಪ್ರಶಂಸೆ ಗಳಿಸಿದ್ದಾರೆ.

ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಸುಮಾರು 10 ಚಿತ್ರಗಳನ್ನು ತಮ್ಮ ಕೈಯಲ್ಲಿ ಹೊಂದಿರುವ ಈ ನಟಿ, ಹಿಂದಿ ಚಿತ್ರರಂಗಕ್ಕೆ ತಮ್ಮ ಪದಾರ್ಪಣೆಯ ಬಗ್ಗೆಯೂ ಘೋಷಿಸಿದ್ದಾರೆ. 'ನಾನೀಗ ಮುಕ್ತಳಾಗಿದ್ದೇನೆ ಮತ್ತು ತುಂಬಾ ಸಂತೋಷವಾಗಿದ್ದೇನೆ. ನನ್ನಲ್ಲಿ ಒಂದು ರೀತಿಯ ಸಕಾರಾತ್ಮಕತೆ ಇದೆ. ಅದು ಏನೆಂದು ನನಗೆ ತಿಳಿದಿಲ್ಲ, ಆದರೆ ನಾನೀಗ ಸಂಪೂರ್ಣವಾಗಿ ಸಕಾರಾತ್ಮಕ ಮತ್ತು ಸಂತೋಷದಾಯಕ ಸ್ಥಿತಿಯಲ್ಲಿದ್ದೇನೆ' ಎಂದು ಅವರು ಹೇಳಿದರು.

ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಮಾತನಾಡಿದ ಅವರು, 'ಇದು ಕಥೆ ಮತ್ತು ನಿರ್ದೇಶಕರ ಮೇಲೆ ಹಾಗೂ ತಂಡದೊಂದಿಗೆ ನನಗಿರುವ ಬಾಂಧವ್ಯದ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಅಭಿಪ್ರಾಯಕ್ಕೆ ಅವಕಾಶವಿಲ್ಲದಿದ್ದರೆ, ನಾನು ಸುಮ್ಮನಿರುತ್ತೇನೆ; ಮೌನವಾಗಿ ನನ್ನ ಕೆಲಸವನ್ನು ಮಾತ್ರ ಮಾಡುತ್ತೇನೆ. ಆದರೆ, ಅವರು ನನ್ನ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಚರ್ಚೆಗೆ ಅವಕಾಶ ನೀಡಿದರೆ, ಖಂಡಿತವಾಗಿಯೂ ನನ್ನ ಸಲಹೆಗಳನ್ನು ನೀಡುತ್ತೇನೆ' ಎಂದು ಹೇಳಿದರು.

ಆರೋಗ್ಯಕರ ಚರ್ಚೆಗಳು ಒಂದು ದೃಶ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯ ಮಾಡುತ್ತವೆ ಎಂಬುದು ಅವರ ದೃಢ ನಂಬಿಕೆ. ಕೆಲವೊಮ್ಮೆ ಇಂತಹ ಚರ್ಚೆಗಳಿಂದ ಕಥೆಯಲ್ಲಿ ಅಥವಾ ಸಂಭಾಷಣೆಯಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆಗಳಾಗಬಹುದು; ಇಂತಹ ಸುಧಾರಣೆಗಳನ್ನು ಅನುಪಮಾ ಸಂಪೂರ್ಣವಾಗಿ ಸ್ವಾಗತಿಸುತ್ತಾರೆ. 'ನಾನು ಒಂದು ನಿರ್ದಿಷ್ಟ ಚಿತ್ರೀಕರಣಕ್ಕಾಗಿ ಮಾನಸಿಕವಾಗಿ ಸಿದ್ಧಳಾಗಿರುತ್ತೇನೆ, ಆದರೆ ಇದ್ದಕ್ಕಿದ್ದಂತೆ ಏನೋ ಬದಲಾಗಿದೆ ಎಂದು ಅವರು ಹೇಳಬಹುದು. ಕೆಲವೊಮ್ಮೆ ಇಂತಹ ಬದಲಾವಣೆಗಳು ಉತ್ತಮ ಫಲಿತಾಂಶವನ್ನೇ ನೀಡುತ್ತವೆ. ಇವೆಲ್ಲವೂ ಸಹಜ, ನಾವು ಇಂತಹ ಬದಲಾವಣೆಗಳಿಗೆ ಸಿದ್ಧರಾಗಿರಬೇಕು' ಎಂದರು.

'ನಾನೊಬ್ಬ ಬಹುಮುಖಿ ನಟಿಯಾಗಬೇಕೆಂಬುದು ಯಾವಾಗಲೂ ನನ್ನ ಗುರಿಯಾಗಿದೆ. ಒಂದೇ ಪ್ರಕಾರದ ಚಿತ್ರಗಳಲ್ಲಿ ನಟಿಸುತ್ತಾ ಹೋದರೆ ಅದು ನನಗೆ ಬೇಸರ ತರಿಸುತ್ತದೆ. ಅದಕ್ಕಾಗಿಯೇ ನಾನು 'ಟಿಲ್ಲು ಸ್ಕ್ವೇರ್', 'ಪರದ' ಮತ್ತು 'ಕ್ರೇಜಿ ಕಲ್ಯಾಣಂ'ನಂತಹ ಚಿತ್ರಗಳಲ್ಲಿ ನಟಿಸಿದೆ. ಇದರ ಜೊತೆಗೆ ನಾನು ಶೋಗಳು, ರೀಲ್ಸ್‌ಗಳು, ಕಿರುಚಿತ್ರಗಳು ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿಯೂ ಕೆಲಸ ಮಾಡಲು ಬಯಸುತ್ತೇನೆ. ನಾನು ಒಂದೇ ಚೌಕಟ್ಟಿಗೆ ಸೀಮಿತವಾಗಲು ಬಯಸುವುದಿಲ್ಲ; ಬದಲಾಗಿ, ಹೊಸ ವಿಷಯಗಳನ್ನು ಅನ್ವೇಷಿಸುತ್ತಾ ವಿಭಿನ್ನ ಕೆಲಸಗಳನ್ನು ಮಾಡಲು ಇಷ್ಟಪಡುತ್ತೇನೆ. ನಾನು ಕೇವಲ ಹಣಕ್ಕಾಗಿ ಕೆಲಸ ಮಾಡಲು ಬಯಸುವುದಿಲ್ಲ. ನನ್ನ ಕೆಲಸವನ್ನು ಆನಂದಿಸಲು ನನಗೆ ಅದರಲ್ಲಿ ಆಸಕ್ತಿ ಮತ್ತು ಉತ್ಸಾಹವಿರಬೇಕು; ಹಾಗಾಗಿಯೇ ನಾನು ವೈವಿಧ್ಯಮಯ ಚಲನಚಿತ್ರಗಳನ್ನು ಅನ್ವೇಷಿಸಲು ಬಯಸುತ್ತೇನೆ' ಎಂದರು.

ನಟನೆಯ ಹೊರತಾಗಿ, ಕೆಲವು ವರ್ಷಗಳ ಹಿಂದೆ ಮಲಯಾಳಂ ಚಿತ್ರವೊಂದರಲ್ಲಿ ಸಹಾಯಕ ನಿರ್ದೇಶಕಿಯಾಗಿಯೂ ಅನುಮಾ ಕೆಲಸ ಮಾಡಿದ್ದರು. ಈ ಅನುಭವವನ್ನು ಅವರು ತಮ್ಮ ವೃತ್ತಿಪರ ಪಯಣದ ಒಂದು ಪ್ರಮುಖ ಭಾಗವೆಂದು ಪರಿಗಣಿಸುತ್ತಾರೆ. 'ನಾನು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದಾಗ, ಸಿನೆಮಾದ ಬಗ್ಗೆ ಆಳವಾಗಿ ಬಹಳಷ್ಟು ವಿಷಯಗಳನ್ನು ಕಲಿತುಕೊಂಡೆ. ಆ ನೆನಪು ನನಗೆ ತುಂಬಾ ಪ್ರಿಯವಾಗಿದೆ; ಆ ಅನುಭವವು ನನ್ನ ನಟನೆಗೆ ಹಾಗೂ ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನನಗೆ ನೆರವಾಗಿದೆ. ನಾವು ಪರದೆ ಮೇಲೆ ನಟರನ್ನು ನೋಡುತ್ತೇವೆ, ಅವರಿಗೆ ಮನ್ನಣೆ ಸಿಗುತ್ತದೆ; ಆದರೆ ತೆರೆಮರೆಯಲ್ಲಿ ಕೆಲಸ ಮಾಡುವ ಅನೇಕರಿಗೆ ಅಂತಹ ಮನ್ನಣೆ ಸಿಗದೇ ಹೋಗಬಹುದು. ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರಿಂದ ನನಗೆ ಸಿಕ್ಕ ಭಾವನಾತ್ಮಕ ತೃಪ್ತಿ ಮತ್ತು ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ' ಎಂದು ಅವರು ಹೇಳುತ್ತಾರೆ.

ಇತ್ತೀಚಿನ ಸಂದರ್ಶನಗಳಲ್ಲಿ, ಅನುಪಮಾ ತಮ್ಮ ವೈಯಕ್ತಿಕ ಜೀವನದ ಕಠಿಣ ಹಂತದ ಬಗ್ಗೆಯೂ ಮಾತನಾಡಿದ್ದಾರೆ. 'ಮೊದಲಿಗೆ, ನನ್ನ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ನಾನು ಅರಿತುಕೊಂಡೆ; ಅಲ್ಲಿಂದಲೇ ಬದಲಾವಣೆ ಆರಂಭವಾಯಿತು. ನನ್ನ ಕುಟುಂಬದವರು ಮತ್ತು ಸ್ನೇಹಿತರು ನನಗೆ ಬಹಳಷ್ಟು ಸಹಾಯ ಮಾಡಿದರು. ನಾನು ಅನುಭವಿಸಿದ ನೋವು, ನನ್ನ ಭವಿಷ್ಯದ ಮೇಲೆ ಪರಿಣಾಮ ಬೀರಬಹುದಾಗಿದ್ದ ಕೆಲವು ಜಟಿಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನನಗೆ ನೆರವಾಯಿತು. ಹಾಗಾಗಿ, ನಾನು ಚಿಕಿತ್ಸೆ (ಥೆರಪಿ) ಪಡೆಯಲು ಪ್ರಾರಂಭಿಸಿದೆ. ತಮ್ಮ ಸಂಕಷ್ಟಗಳ ಆಳವಾದ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಈ ಚಿಕಿತ್ಸೆಯು ತಮಗೆ ಸಹಾಯ ಮಾಡಿತು' ಎಂದು ಅನುಪಮಾ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ವಿರುದ್ಧ ಇಂಡಿಯಾ ಒಕ್ಕೂಟದಿಂದ ಸಾರ್ವಜನಿಕ ದೋಷಾರೋಪಣೆ: ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಧ್ಯಕ್ಷತೆ!

KPSC: ರಾಜ್ಯ ಸರ್ಕಾರಕ್ಕೆ ಭಾರಿ ಶಾಕ್; ಸುಪ್ರೀಂ ನಲ್ಲಿ 2022 ರ ವಿಶೇಷ ಕಾಯ್ದೆ ರದ್ದು! 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು!

ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು

Israel polls: ಅರಬ್ ಪಾರ್ಟಿಗಳೇ 'ಕಿಂಗ್ ಮೇಕರ್' ಆಗೋ ಸಾಧ್ಯತೆ; ಅಧಿಕಾರದಿಂದ ನೆತನ್ಯಾಹು ಕಿತ್ತೆಸೆಯಲು ಪ್ಲಾನ್!

ಇಸ್ರೇಲ್ ಚುನಾವಣೆ ಫಲಿತಾಂಶ: ಬಹುಮತ ಪಡೆಯುವಲ್ಲಿ ನೆತನ್ಯಾಹು, ಗಾಡಿ ಐಸೆನ್‌ಕೋಟ್‌ ವಿಫಲ, ಮೈತ್ರಿ ಅಗತ್ಯ!