ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಎಂದಿಗೂ ಹಿಂಜರಿಯದ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ ಅವರು ಈಗ ಪಿರಿಯಡ್ಸ್, PCOS ಹಾಗೂ ಸಿನಿಮಾ ಶೂಟಿಂಗ್ ವೇಳೆ ತಾವು ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ಸಹ ಮಹಿಳೆಯರು ಪ್ರತಿ ತಿಂಗಳು ಅನುಭವಿಸುವ ಮುಟ್ಟಿನ ನೋವನ್ನು ಅರ್ಥಮಾಡಿಕೊಳ್ಳಲು ಗಂಡಸರು ಒಮ್ಮೆಯಾದರೂ ಪೀರಿಯಡ್ಸ್ ನೋವನ್ನು ಅನುಭವಿಸಬೇಕು ಎಂದು ಹೇಳಿದ್ದರು.
ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶ್ರುತಿ ಹಾಸನ್ ಅವರು, ಮುಟ್ಟಿನ ನೋವಿಗೆ ಜನ ಹೆಚ್ಚಿನ ಮಹತ್ವ ನೀಡುವುದಿಲ್ಲ. ಆದರೆ ಪುರುಷರಿಗೂ ಮುಟ್ಟು ಆಗಬೇಕೆಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.
ಮುಟ್ಟಿನ ಕುರಿತಾದ ತಪ್ಪು ಕಲ್ಪನೆಗಳ ಬಗ್ಗೆ ಚರ್ಚಿಸುವಾಗ ನಟಿ ಶ್ರುತಿ ಹಾಸನ್ ಹೀಗೆ ಹೇಳಿದ್ದು, "ಇದಕ್ಕೆ ಒಂದೇ ಒಂದು ಪರಿಹಾರವಿದೆ; ಪುರುಷರಿಗೂ ಮುಟ್ಟು ಆಗಲಿ ಎಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ. ಆಗ ನಮ್ಮ ಉದ್ಯೋಗ ಒಪ್ಪಂದಗಳಲ್ಲಿ 'ಪಿರಿಯಡ್ ಹಾಲಿಡೇ'(ಮುಟ್ಟಿನ ರಜೆ) ಸೇರಿಸಬಹುದು ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
"ಇದಕ್ಕೆ ಸಹಮತ ವ್ಯಕ್ತಪಡಿಸಿದ ಸೋಹಾ, ಪುರುಷರಿಗೂ ಪಿರಿಯಡ್ಸ್ ಬಂದರೆ ಆ ತಿಂಗಳು ಯಾರಿಗೆ ಹೆಚ್ಚು ರಕ್ತಸ್ರಾವವಾಯಿತು, ಯಾರ ಟ್ಯಾಂಪೂನ್ ದೊಡ್ಡದಿದೆ ಎಂಬುದರ ಬಗ್ಗೆಯೂ ಅವರು ಪರಸ್ಪರ ಸ್ಪರ್ಧೆ ಮಾಡಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.
PCOS ನೋವು ಹಂಚಿಕೊಂಡ ನಟಿ
ನನಗೆ PCOS(Polycystic Ovary Syndrome) ಸಮಸ್ಯೆ ಇರುವುದರಿಂದ ಪಿರಿಯಡ್ಸ್ ವೇಳೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಶ್ರುತಿ ಹಾಸನ್ ಅವರಿಗೆ ತಿಳಿಸಿದ್ದಾರೆ. ಆದರೆ ವೃತ್ತಿಜೀವನದ ಆರಂಭದಲ್ಲಿ ಶೂಟಿಂಗ್ ಸೆಟ್‌ನಲ್ಲಿ ಈ ವಿಚಾರವನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರುತಿ ಹೇಳಿದ್ದಾರೆ.
ಇದು ಕೇವಲ ಮುಜುಗರ ಅಥವಾ ನಿಷೇಧದ ವಿಚಾರವಾಗಿರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಪಿರಿಯಡ್ಸ್ ಬಗ್ಗೆ ಹೇಳಿದರೆ ಅದನ್ನು ಇತರರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ತಮ್ಮಲ್ಲಿತ್ತು ಎಂದು ಅವರು ವಿವರಿಸಿದ್ದಾರೆ. ಆದರೆ ಕಾಲ ಕಳೆದಂತೆ ತಮ್ಮ ಸಮಸ್ಯೆಯನ್ನು ಸಹೋದ್ಯೋಗಿಗಳು ಮತ್ತು ನಿರ್ದೇಶಕರೊಂದಿಗೆ ಹಂಚಿಕೊಳ್ಳುವುದರಿಂದ ಕೆಲಸವನ್ನು ಉತ್ತಮ ರೀತಿಯಲ್ಲಿ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಂಡಿರುವುದಾಗಿ ಹೇಳಿದ್ದಾರೆ.