ಹೈದರಾಬಾದ್: ಸೂಪರ್ ಹಿಟ್ ಡೈರೆಕ್ಟರ್ ಅಟ್ಲಿ ಕುಮಾರ್ ಹಾಗೂ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಬಿಗ್ ಬಜೆಟ್ ‘ರಾಕಾ’ ಸಿನಿಮಾ ಶೂಟಿಂಗ್ ಹಂತದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ದಾಖಲೆಗೆ ಪಾತ್ರವಾಗಿದೆ.
ಭಾರತೀಯ ಸಿನಿಮಾ ರಂಗದ ತಾಂತ್ರಿಕ ಪಯಣದಲ್ಲಿ ಬರೆದಿಡುವಂತಹ ಅದ್ಭುತ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಅಲ್ಲು ಅರ್ಜುನ್ ನಾಯಕರಾಗಿ ಹಾಗೂ ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಾಕಾ’ ಸಿನಿಮಾವು ಜಾಗತಿಕ ಮಟ್ಟದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿ, ಪ್ರತಿಷ್ಠಿತ ‘ಗಿನ್ನೆಸ್ ವಿಶ್ವ ದಾಖಲೆ’ಗೆ ಭಾಜನವಾಗಿದೆ.
ಸನ್ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್ ಅವರು ನಿರ್ಮಿಸುತ್ತಿರುವ ಈ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ, ತನ್ನ ತಾಂತ್ರಿಕ ಶ್ರೇಷ್ಠತೆಯಿಂದ ಜಾಗತಿಕ ಗಮನ ಸೆಳೆದಿದೆ. ನೈಜ ಸಮಯದಲ್ಲಿ ಏಕಕಾಲಕ್ಕೆ ಗರಿಷ್ಠ ಸಂಖ್ಯೆಯ ಕಲಾವಿದರ ಮೋಷನ್-ಕ್ಯಾಪ್ಚರ್ ಎಂಬ ವಿಭಾಗದಲ್ಲಿ ಈ ಐತಿಹಾಸಿಕ ಸಾಧನೆ ಮೂಡಿಬಂದಿದೆ. 2026ರ ಫೆಬ್ರವರಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ, ಒಂದೇ ಸೆಷನ್‌ನಲ್ಲಿ ಒಟ್ಟು 37 ಕಲಾವಿದರನ್ನ ರಿಯಲ್-ಟೈಮ್‌ನಲ್ಲಿ ಸೆರೆಹಿಡಿಯಲಾಗಿತ್ತು.
4 ವರ್ಷದ ಮಗುವಿನಿಂದ ಹಿಡಿದು 70 ವರ್ಷದ ಹಿರಿಯ ವೃದ್ಧರವರೆಗಿನ ಕಲಾವಿದರು ಇದರಲ್ಲಿ ಭಾಗವಹಿಸಿದ್ರು. ಒಂದೇ ಕ್ಯಾಪ್ಚರ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ಮುಖಭಾವ, ದೈಹಿಕ ಭಾಷೆ ಹಾಗೂ ಅಭಿನಯದ ಸೂಕ್ಷ್ಮ ವಿವರಗಳನ್ನ ನೈಜವಾಗಿ ಸೆರೆಹಿಡಿಯುವುದು ಬೃಹತ್ ಸವಾಲಾಗಿತ್ತು.
ಈ ಸಾಹಸಕ್ಕಾಗಿ ಸಿನಿಮಾದ ವಿಎಫ್‌ಎಕ್ಸ್ ತಂಡವು ವಿಶೇಷ ವರ್ಕ್‌ಫ್ಲೋ ಮತ್ತು ಮೋಷನ್-ಕ್ಯಾಪ್ಚರ್ ಪೈಪ್‌ಲೈನ್ ಸಿದ್ಧಪಡಿಸಿತ್ತು. ಬರೋಬ್ಬರಿ 92 ಆಪ್ಟಿಕಲ್ ಮೋಷನ್-ಕ್ಯಾಪ್ಚರ್ ಕ್ಯಾಮೆರಾಗಳು, ನಿಖರ ನೆಟ್‌ವರ್ಕಿಂಗ್, ಅನ್‌ರಿಯಲ್ ಎಂಜಿನ್‌ನ ರಿಯಲ್-ಟೈಮ್ ದೃಶ್ಯೀಕರಣ, ವಿಟ್‌ನೆಸ್ ಕ್ಯಾಮೆರಾಗಳು ಹಾಗೂ ಫೇಶಿಯಲ್ ಕ್ಯಾಪ್ಚರ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನ ಸೆಟ್‌ನಲ್ಲಿ ರೂಪಿಸಲಾಗಿತ್ತು.
2026ರ ಸೆಪ್ಟೆಂಬರ್ 15ರಂದು ʻಗಿನ್ನೆಸ್ ವಿಶ್ವ ದಾಖಲೆʼಯ ಹಿರಿಯ ತೀರ್ಪುಗಾರರಾದ ಸ್ವಪ್ನಿಲ್ ದಂಗ್ರಿಕರ್ ಅವರು ಈ ಸಾಧನೆಯನ್ನ ಅಧಿಕೃತವಾಗಿ ದೃಢೀಕರಿಸಿ, ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಅವರಿಗೆ ಪ್ರಮಾಣಪತ್ರವನ್ನ ಹಸ್ತಾಂತರಿಸಿದರು.
ಏಪ್ರಿಲ್ 8ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಇದರಲ್ಲಿ ಅವರು ಬೋಳು ತಲೆ, ಕಣ್ಣಿಗೆ ಕಾಡಿಗೆ ಹಾಗೂ ಪ್ರಾಣಿಗಳ ಉಗುರುಗಳನ್ನು ಧರಿಸಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಈ ಕುರಿತು ಅಟ್ಲೀ, "ರಾಕಾ ಬರೀ ಸಿನಿಮಾವಲ್ಲ, ಕಳೆದ 18 ವರ್ಷಗಳಿಂದ ನನ್ನಲ್ಲಿದ್ದ ಒಂದು ಐಡಿಯಾ. ಇದು ನನ್ನನ್ನು ರೂಪಿಸಿದೆ, ಪರೀಕ್ಷಿಸಿದೆ" ಎಂದು ಬರೆದುಕೊಂಡಿದ್ದರು. ಅಲ್ಲು ಅರ್ಜುನ್ ಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.