ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ ಸಿಂಪಲ್ ಸುನಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಲಂಬೋದರ 2.0 ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
ಈ ಚಿತ್ರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ನೈಜ ಹ್ಯೂಮನಾಯ್ಡ್ ರೋಬೋಟ್ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದೆ. ಬೆಂಗಳೂರು ಮೂಲದ ಖ್ಯಾತ ‘ಮಚಾನಿ ರೋಬೋಟಿಕ್ಸ್’ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಜಿಯಾ’ಎಂಬ ಸುಧಾರಿತ ಹ್ಯೂಮನಾಯ್ಡ್ ರೋಬೋಟ್ ಈ ಪಾತ್ರಕ್ಕೆ ಜೀವ ತುಂಬುತ್ತಿರುವುದು ವಿಶೇಷ.
ಇದು ಯಾವುದೇ ಕಂಪ್ಯೂಟರ್ ಗ್ರಾಫಿಕ್ಸ್ ಅಥವಾ ರೋಬೋಟ್ ವೇಷ ಧರಿಸಿರುವ ಕಲಾವಿದರಲ್ಲ; ಬದಲಿಗೆ ಜಿಯಾ ಸ್ವತಃ ತಂತ್ರಜ್ಞಾನ ಆಧಾರಿತ ಕಲಾವಿದೆಯಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದ ಭವಿಷ್ಯದ ಹೆಜ್ಜೆಗೆ ಮುನ್ನುಡಿ ಬರೆದಿದೆ.
ಸೈನ್ಸ್-ಫಿಕ್ಷನ್ ಹಾಗೂ ಸೋಶಿಯಲ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನವಪ್ರತಿಭೆ ಅನಿಲ್ ಶೆಟ್ಟಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಸಾಚಿ ಬಿಂದ್ರಾ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಜೊತೆಗೆ, ‘ರಂಗ್ ದೇ ಬಸಂತಿ’, ‘ಡಾನ್ 2’, ‘ಡಿಯರ್ ಜಿಂದಗಿ’ ಹಾಗೂ ‘ವೀರಂ’ ಮುಂತಾದ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಖ್ಯಾತ ನಟ ಕುನಾಲ್ ಕಪೂರ್ ‘ಲಂಬೋದರ 2.0’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಈ ಚಿತ್ರದ ಮೂಲಕ ಕುನಾಲ್ ಕಪೂರ್ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಅವರ ಪಾತ್ರ ಚಿತ್ರಕಥೆಗೆ ಮಹತ್ವದ ತಿರುವು ನೀಡಲಿದೆ ಎಂದು ತಂಡ ತಿಳಿಸಿದೆ. ಡಿಜಿಟಲ್ ಯುಗದಲ್ಲಿ ಇಂದಿನ ಯುವಜನರ ಬದುಕು ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಎದುರಾಗುತ್ತಿರುವ ಸಂಕೀರ್ಣತೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು. ಕೃತಕ ಬುದ್ಧಿಮತ್ತೆ ಆಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಬೆಂಗಳೂರಿನ ಯುವಕನೊಬ್ಬನ ಜೀವನದ ಮೂಲಕ ನಿಜ ಜಗತ್ತು ಮತ್ತು ಡಿಜಿಟಲ್ ಜಗತ್ತಿನ ನಡುವಿನ ಸಂಘರ್ಷವನ್ನು ಹಂತ-ಹಂತವಾಗಿ ಅನಾವರಣಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಅತಿಯಾದ ಗೀಳು, ಒಂಟಿತನ, ಸಂತೋಷದ ಭ್ರಮೆ, ಡಿಜಿಟಲ್ ವ್ಯಸನ ಹಾಗೂ ಡಿಜಿಟಲ್ ನಿಯಂತ್ರಣದಂತಹ ಸಮಕಾಲೀನ ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ ಎಂದು ನಿರ್ದೇಶಕ ಸಿಂಪಲ್ ಸುನಿ ವಿವರಿಸಿದ್ದಾರೆ.
ಲಂಬೋದರ 2.0 ನಾವು ಪ್ರಸ್ತುತ ಬದುಕುತ್ತಿರುವ ವಾಸ್ತವ ಪ್ರಪಂಚವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಕಥೆ. ಇಂದಿನ ತಂತ್ರಜ್ಞಾನವು ನಮ್ಮ ಭಾವನೆಗಳು ಹಾಗೂ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಸಿನಿಮಾ ಗಾಢವಾಗಿ ತೆರೆದಿಡಲಿದೆ.
ಸಿಂಪಲ್ ಸುನಿ ಅವರಂತಹ ಪ್ರತಿಭಾವಂತ ನಿರ್ದೇಶಕರ ಮಾರ್ಗದರ್ಶನದಲ್ಲಿ ಇಂತಹ ಅದ್ಭುತ ಕಥಾವಸ್ತುವಿನ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ನನ್ನ ಪಾಲಿಗೆ ಅತ್ಯಂತ ವಿಶೇಷ ಮತ್ತು ಹೆಮ್ಮೆಯ ವಿಚಾರ ಎಂದು ನಟ ಅನಿಲ್ ಶೆಟ್ಟಿ ಹೇಳಿದ್ದಾರೆ.