ವಾಸ್ತು ಪ್ರಕಾರ ಚಿತ್ರ ವಿಮರ್ಶೆ 
ಸಿನಿಮಾ ವಿಮರ್ಶೆ

ವಾಸ್ತುಗಳು, ಮಾತುಗಳು, ತಲೆಚಿಟ್ಟು ಹಿಡಿಸುವ ಚಿತ್ರಗಳು

ವಾಸ್ತು ಕಾರ್ಯಕ್ರಮಗಳನ್ನು ನೋಡಿ ಆ ಪಂಡಿತರ ಹಾವ ಭಾವಗಳನ್ನು ಅವರ ಚಿಂತನೆಗಳನ್ನು ಲೇವಡಿ ಮಾಡಿ ಹಾಸ್ಯ ಮಾಡಿ ಮನರಂಜನೆ ತೆಗೆದುಕೊಳ್ಳುವುದೇ ಲೇಸು!

ಹಲವಾರು ಪ್ರತಿಭಾವಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗದಲ್ಲಿ ಹುಟ್ಟುಹಾಕಿದ್ದಾರೆ ಎಂಬ ಒಂದೇ ಅಂಶಕ್ಕೆ 'ನಿರ್ದೇಶಕರ ನಿರ್ದೇಶಕ' ಎಂದು ಕರೆಯಬಹುದಾದ ಯೋಗರಾಜ್ ಭಟ್ ಮೂರು ವರ್ಷಗಳ ವಿರಾಮದ ನಂತರ 'ವಾಸ್ತುಪ್ರಕಾರ' ಸಿನೆಮಾದೊಂದಿಗೆ ಹಿಂದಿರುಗಿದ್ದಾರೆ. ಈಗ ಕ್ರಿಕೆಟ್ ಗೆ ಬಯ್ಯುವಂತಿಲ್ಲ; ಸಂಭಾಷಣೆಯೇ ಜೀವಾಳವಾಗಿರಿಸಿಕೊಂಡು, ಯುವ ಜನರನ್ನೇ ಗುರಿಯಾಗಿಸಿಕೊಂಡು ಇಷ್ಟು ದಿನ ಸಿನೆಮಾಗಳನ್ನು ಮಾಡುತ್ತಿದ್ದ ಯೋಗರಾಜ್ ಭಟ್ 'ವಾಸ್ತುಪ್ರಕಾರ'ದಲ್ಲಿ ಏನಾದರು ಹೊಸತನ ತೋರಿದ್ದಾರೆಯೇ? ಪ್ರೇಕ್ಷಕನ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆಯೇ?

ಹನುಮಪುರದಲ್ಲಿ ವಾಸ್ತು ಶಾಸ್ತ್ರ ಬಲ್ಲ ಪ್ರಚಂಡ ಪಂಡಿತ (ಟಿ ಎನ್ ಸೀತಾರಾಮ್) ಅವರ ಮಗನಿಗೆ (ರಕ್ಷಿತ್ ಶೆಟ್ಟಿ) ವಾಸ್ತು ಎಂದರೆ ದ್ವೇಷ-ಉರಿ! ಊರಿನ ಹನುಮ ದೇವರ ವಾಸ್ತು ಬದಲಾಯಿಸಿ, ಊರಿನವರಿಂದ ಛೀಮಾರಿ ಹಾಕಿಸಿಕೊಂಡು ಅಲ್ಲಿಂದ ಹೊರಬಿದ್ದು ಅಮ್ಮನ(ಸುಧಾ ಬೆಳವಾಡಿ) ಸಲಹೆಯಂತೆ, ವಿದೇಶ ವಾಸ್ತೇನಿಯಾಕ್ಕೆ ತೆರಳುತ್ತಾನೆ. ಅಲ್ಲಿ ತನ್ನ ಸೋದರ ಮಾವ(ಜಗ್ಗೇಶ್) ಏನೋ ವ್ಯವಹಾರ ನಡೆಸುತ್ತಿರುತ್ತಾನೆ. ಅಲ್ಲಿ ಅವನನ್ನು ಸೇರಿ ಹೊಸದಾಗಿ ದುಡ್ಡು ಮಾಡಲು, ಅಲ್ಲಿ ನೆಲೆಸಿರುವ ಮತ್ತೊಂದು ಕನ್ನಡಿಗ ಕುಟುಂಬದ ಮನೆಯ ವಾಸ್ತು ಸರಿ ಮಾಡುವ ಸ್ಕೆಚ್ ಹಾಕುತ್ತಾರೆ. ಅದೂ ಕೂಡ ಒಡೆದ ಕುಟುಂಬ. ಅಪ್ಪ (ಅನಂತನಾಗ್), ಅಮ್ಮ (ಸುಧಾರಾಣಿ) ಇವರಿಬ್ಬರ ಜಗಳದಲ್ಲಿ ಕೂಸು(ಐಶಾನಿ ಶೆಟ್ಟಿ) ಬಡವಾಗಿರುತ್ತದೆ. ಇವರಿಗೆ ವಿಚ್ಚೇಧನ ಕೊಡಿಸುವ ಲಾಯರ್(ಪರುಲ್ ಯಾದವ್). ಮುಂದೆ ನಡೆಯುವ ಹತ್ತು ಹಲವು ಘಟನೆಗಳೇ ಸಿನೆಮಾ!

ಸಿನೆಮಾದಲ್ಲಿ ಕಥೆ ಹೇಳುವ ಅವಶ್ಯಕತೆ ಇಲ್ಲ ಎನ್ನುವ ಒಂದು ವಿಚಿತ್ರ ಪರಿಕಲ್ಪನೆ ಹೊಂದಿರುವ ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಯಾವುದೇ ಕಥೆ ಇಲ್ಲದೆ, 'ವಾಸ್ತು' ಎಂಬ ಪದದ ಹಿಂದೆ ಬಿದ್ದು, ವಿದೇಶದಲ್ಲಿ ಚಿತ್ರೀಕರಣ ನಡೆಸಿ ಹತ್ತು ಹಲವು ಸತ್ವವಿಲ್ಲದ ಘಟನೆಗಳನ್ನು ಸೇರಿಸಿ ವಾಸ್ತುಪ್ರಕಾರ ಹೆಣೆದಿದ್ದಾರೆ. 'ಸಂಭಾಷಣಾ ಚತುರ' ಎಂದೇ ಹೆಸರಾದ ನಿರ್ದೇಶಕ ಈ ಬಾರಿ ಕನ್ನಡ ಸಂಭಾಷಣೆಗಷ್ಟೇ ಸೀಮಿತವಾಗದೆ 'ಜಿಬ್ಬರಿಶ್(ಅರ್ಥವಿಲ್ಲದ ಮಾತುಗಳು) ಸಂಭಾಷಣೆ'ಯನ್ನು ಸೃಷ್ಟಿಸಿದ್ದಾರೆ. ಮಧ್ಯಂತರದಲ್ಲಿ ನಿರೂಪಕ ಹೇಳುವ, ಹಾಡಿನಲ್ಲಿ ಬರುವ ಒಂದೆರಡು ಸಾಲುಗಳ ಮೂಲಕ ತಿಳಿದುಕೊಳ್ಳುವುದಾದರೆ, ಜೀವನಕ್ಕೆ ವಾಸ್ತು ಮುಖ್ಯವಲ್ಲ. ಮನೆಯ ಗೋಡೆ ಕೆಡವುದರಿಂದ ಯಾವ ತೊಂದರೆಯೂ ಪರಿಹಾರವಾಗುವುದಿಲ್ಲ, ಮನಸ್ಸಿನ ಗೋಡೆ ಕೆಡವಬೇಕು ಎಂಬ ಉನ್ನತ ತತ್ತ್ವ ಕೇಳಿಬಂದರೂ, ಸಿನೆಮಾದಲ್ಲಿನ ಕಥೆಯಾಗಲೀ, ಘಟನೆಗಳಾಗಲೀ, ನಟನೆಯಾಗಲಿ ಈ ಉನ್ನತ ತತ್ತ್ವವನ್ನು ಚಿತ್ರಿಸುವ-ಪ್ರೇಕ್ಷಕರಿಗೆ ದಾಟಿಸುವ ಗಟ್ಟಿತನ ಹೊಂದಿಲ್ಲ. ಜಗ್ಗೇಶ್ ಅವರ ವಿಪರೀತ ಮಾತು, ಅವವೇ ಹಳಸು ಜೋಕುಗಳು ಬೇಸರ ತರಿಸುತ್ತವೆ. ರಕ್ಷಿತ್ ಶೆಟ್ಟಿ ಅವರ ನಟನೆ ಎಲ್ಲೂ ರುಚಿಸುವುದಿಲ್ಲ. ಮುಖ ಭಾವನೆಯೇ ಬದಲಾಗದೆ, ಈ ಹಿಂದೆ ಯೋಗರಾಜ್ ಭಟ್ ಸಿನೆಮಾಗಳಲ್ಲಿ ದಿಗಂತ್ ನಟಿಸುತ್ತಿದ್ದ ಪಾತ್ರವನ್ನು ನಟಿಸಲು ಪ್ರಯತ್ನಿಸಿ ದಯನೀಯವಾಗಿ ಸೋತಿದ್ದಾರೆ. ಯೋಗರಾಜ್ ಭಟ್ ಅವರ ಪಾಳೆಯದಲ್ಲಿ ದಿಗಂತ್ ಅವರ ಕೊರತೆಯನ್ನು ಎತ್ತಿ ಹಿಡಿದಿದ್ದಾರೆ! ಹೊಸ ಪರಿಚಯ ಐಶಾನಿ ಶೆಟ್ಟಿ ಕೂಡ ಸಾಧಾರಣ ನಟನೆ ನೀಡಿದ್ದಾರೆ. ಒಡೆದ ಸಂಬಂಧದಲ್ಲಿ ಏರು ದನಿಯ ಹೆಂಡತಿಯ ಪಾತ್ರ ಮಾಡಿರುವ ಸುಧಾರಾಣಿ ತಮ್ಮ ಚಾರ್ಮ್ ಕಳೆದುಕೊಂಡಿರುವುದು ತೋರಿಸಿಕೊಂಡಿದ್ದಾರೆ. ಒಡೆದ ಕುಟುಂಬದ ಕಥೆ ಹೇಳುವ ಹಳೆಯ ಸಿನೆಮಾ 'ಮನೆದೇವ್ರು' ಸಿನೆಮಾದ ಒಂದು ಟ್ಯೂನ್ ಅಲ್ಲಲ್ಲಿ ಹಿನ್ನಲೆಯಲ್ಲಿ ಬರುವುದರಿಂದ, ಆ ಸಿನೆಮಾಗಿ ನಮ್ಮ ನೆನಪು ಕೆಲವೊಮ್ಮೆ ಜಾರಿಬಿಡುತ್ತದೆ. ಮೌನಿಯ ಪಾತ್ರದಲ್ಲಿ ಅನಂತನಾಗ್ ಅವರ ನಟನೆ ಎಂದಿನಂತೆ. ವಾಸ್ತು ಪಂಡಿತನ ಪಾತ್ರದಲ್ಲಿ ಟಿ ಎನ್ ಸೀತಾರಾಮ್ ನಟನೆ, ನನಗೆ ಲಾಯರ್ ಪಾತ್ರವೇ ಸೂಕ್ತ ಎನ್ನುವಂತಿದೆ. ಇದ್ದುದರಲ್ಲಿ ಸಿನೆಮಾದ ಸಂಗೀತ ಸ್ವಲ್ಪ ರಿಲೀಫ್ ನೀಡುತ್ತದೆ. ಹರಿಕೃಷ್ಣ ಅವರು ಸಿನೆಮಾವನ್ನು ಎತ್ತಿಹಿಡಿಯಲು ತಮ್ಮ ಸರ್ವಶಕ್ತ ಪ್ರಯತ್ನ ಮಾಡಿದ್ದಾರೆ. ಯೋಗರಾಜ್ ಭಟ್ ಕೂಡ ಧಾರವಾಹಿ ಹಿನ್ನಲೆಯಿಂದ ಬಂದವರೇ ಅಲ್ಲವೇ! ಸೀತಾರಾಮ್ ಕೂಡ ಇದ್ದಾರೆ, ಇಬ್ಬರೂ ಒಟ್ಟಿಗೆ ಸೇರಿ ತಮ್ಮ ಹಳೆಯ ಧಾರಾವಾಹಿ ದಿನಗಳ ನೆನಪಿನಲ್ಲಿ ಈ ಸಿನೆಮಾ ಮಾಡಿಬಿಟ್ಟರೆ ಎಂದೆನಿಸದೆ ಇರಲಾರದು!

'ವಾಸ್ತು' ಎಂಬುದು ಸರಿಯಲ್ಲ ಎಂದು ಯೋಗರಾಜ್ ಭಟ್ ಅವರಿಗೆ ಅನ್ನಿಸಿರುವುದು ಸರಿಯೇ! ಸಿನೆಮಾದಲ್ಲಿ 'ವಾಸ್ತು' ಎಂಬ ಪದವನ್ನು ನೂರಾರು ಬಾರಿ ಕೇಳುತ್ತೇವೆ, ಆದರೆ ವಾಸ್ತುವಿನಿಂದ ಹೇಗೆ ಜನರು ಬಲಿಯಾಗುತ್ತಿದ್ದಾರೆ ಎಂಬುದಕ್ಕೆ ಸಿನೆಮಾದಲ್ಲಿ ಎಲ್ಲಿಯೂ ಪುಷ್ಟಿ ಸಿಗುವಂತಹ ದೃಶ್ಯಗಳಿಲ್ಲ. ಅವಾಸ್ತವಿಕ ಕಥೆ, ಅವಾಸ್ತವದ ವಿಕ್ಷಿಪ್ತ ಪಾತ್ರಗಳು ವಾಸ್ತುವಿನ ಅಡ್ಡಪರಿಣಾಮಗಳ ಬೆಳಕುಚೆಲ್ಲುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಸಂಬಂಧಗಳ ನಡುವಿನ ಕಂದಕಕ್ಕೆ ಕಾರಣಗಳನ್ನು ಸಿನೆಮಾ ನಿರೂಪಿಸುವುದಿಲ್ಲ. ಆದರೆ ಕೊನೆಗೆ ಇದ್ದಕ್ಕಿದ್ದ ಹಾಗೆ ಎಲ್ಲ ಸಂಬಂಧಗಳು ಒಗ್ಗೂಡಿ, ವಾಸ್ತು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು, ತಾವು ನೀಡಬೇಕೆಂದಿದ್ದ ಸಂದೇಶಕ್ಕೆ ತಕ್ಕನಾಗಿ ನಿರ್ದೇಶಕರು ಸರಿಯಾದ ದಿಕ್ಕಿನಲ್ಲಿ ಚಿಂತನೆ ನಡೆಸಿ ದುಡಿದಿಲ್ಲ ಎಂಬುದನ್ನು ಎತ್ತಿ  ತೋರಿಸುತ್ತದೆ. ಮನರಂಜನೆ ದೃಷ್ಟಿಯಿಂದಾಗಲಿ, ಸಂದೇಶವನ್ನು ಪರಿಣಾಮಕಾರಿಯಾಗಿ ನೀಡುವುದರಿಂದಾಗಲೀ ಸಿನೆಮಾ ಸಾಕಷ್ಟು ಹಿಂದೆ ಬಿದ್ದಿದೆ. ವಾಸ್ತು ಗೋಡೆ ಒಡೆಯುವುದಲ್ಲ, ಮನಸ್ಸಿನ ನಡುವಿನ ಗೋಡೆಯನ್ನು ಕೆಡವಬೇಕೆಂಬ ನಿರ್ದೇಶಕರ ಜಾಣ್ಮೆಯ ಮಾತು ಸರಿ. ಅದನ್ನು ಸ್ವಲ್ಪ ವಿಸ್ತರಿಸಿ ಹೇಳುವುದಾದರೆ ಈ ನಿರ್ದೇಶಕರು ಸಿನೆಮಾ ಎಂದರೆ ಕಥೆಯೇ ಬೇಡ, ಘಟನೆಗಳೇ, ಸಂಭಾಷಣೆಯೇ ಸಾಕು ಎಂದು ತಿಳಿದು ಕಟ್ಟಿಕೊಂಡಿರುವ ಗೋಡೆಯನ್ನು ಕೆಡವುವುದು ಒಳಿತು. ಇದು ಸ್ವಲ್ಪ ವಿಪರೀತ ಎನ್ನಿಸಿದರೂ ಈ ಸಿನೆಮಾ ನೋಡುವುದರ ಬದಲು, ಟಿವಿ ವಾಹಿನಿಗಳಲ್ಲಿ ಬರುವ ವಾಸ್ತು ಕಾರ್ಯಕ್ರಮಗಳನ್ನು ನೋಡಿ ಆ ಪಂಡಿತರ ಹಾವ ಭಾವಗಳನ್ನು ಅವರ ಚಿಂತನೆಗಳನ್ನು ಲೇವಡಿ ಮಾಡಿ ಹಾಸ್ಯ ಮಾಡಿ ಮನರಂಜನೆ ತೆಗೆದುಕೊಳ್ಳುವುದೇ ಲೇಸು!

- ಗುರುಪ್ರಸಾದ್
guruprasad.n@kannadaprabha.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT