ಶಾರ್ಪ್ ಶೂಟರ್ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕ್ಕೆ 'ಯಾವತ್ತು ಹೋಗ್ಬಾರ್ದು ರ್ರೀ'

ಕೆಲಸವಿಲ್ಲದ ಸೋಮಾರಿ ಯುವಕನ ಉಡಾಫೆ ಪಾತ್ರಗಳಲ್ಲಿ ಕನ್ನಡ ಪ್ರೇಕ್ಷಕನ ಮನದಲ್ಲಿ ಮನೆಮಾಡಿರುವ ದೂದ್ ಪೇಡ ದಿಗಂತ್ ಅವರ ೨೫ ನೇ ಚಿತ್ರವಾಗಿ 'ಶಾರ್ಪ್ ಶೂಟರ್'

ಕೆಲಸವಿಲ್ಲದ ಸೋಮಾರಿ ಯುವಕನ ಉಡಾಫೆ ಪಾತ್ರಗಳಲ್ಲಿ ಕನ್ನಡ ಪ್ರೇಕ್ಷಕನ ಮನದಲ್ಲಿ ಮನೆಮಾಡಿರುವ ದೂದ್ ಪೇಡ ದಿಗಂತ್ ಅವರ ೨೫ ನೇ ಚಿತ್ರವಾಗಿ 'ಶಾರ್ಪ್ ಶೂಟರ್' ಬಿಡುಗಡೆಯಾಗಿದೆ. ನಿರ್ದೇಶಕ ಗೌಸ್ ಪೀರ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಪ್ರೇಕ್ಷಕನ ಎದೆಯೊಳಗೆ ಹೊಕ್ಕುವುದೇ?

ನಂದಿನಿ(ಸಂಗೀತಾ ಚೌಹಾನ್) ವಕೀಲೆ. ಅವಳಿಗೆ ನಿಕ್ಟೋಫೋಬಿಯಾ ಅಂದರೆ ರಾತ್ರಿಯೆಂದರೆ ಇನ್ನಿಲ್ಲದ ಭಯ. ಆಕಸ್ಮಿಕವಾಗಿ ಭೇಟಿ ಆಗುವ ಜೆಕೆ ಅಲಿಯಾಸ್ ಜೇಡರ ಕಣ್ಣಪ್ಪ (ದಿಗಂತ್) ನಂದಿಯನ್ನು ರೌಡಿಯಿಂದ ಉಳಿಸುವುದರ ಪರಿಣಾಮವಾಗಿ ಇಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ. ನಂದಿನಿ ತನ್ನ ಐಬನ್ನು ಜೆಕೆಯಲ್ಲಿ ನಿವೇದಿಸಿಕೊಳ್ಳುತ್ತಾಳೆ. ಆದರೆ ತನ್ನ ತಾಯಿಗೆ ನೀಡಿದ ವಚನದಂತೆ ದಿಗಂತ್ ತನ್ನ ರಾತ್ರಿಕುರುಡು ದೋಷವನ್ನು ಮುಚ್ಚಿಡುತ್ತಾನೆ. ನಂದಿನಿಯ ಒತ್ತಾಸೆಯ ಮೇರೆಗೆ ಒಮ್ಮೆ ರಾತ್ರಿ ಊಟಕ್ಕೆ ಕರೆದೊಯ್ದಾಗ ನಡೆಯುವ ಅಚಾತುರ್ಯದಿಂದ ತೊಂದರೆಗೆ ಸಿಲುಕುತ್ತಾನೆ. ಮುಂದೇನಾಗುತ್ತದೆ?

ಕನ್ನಡ ಸಿನೆಮಾಗಳಿಗೆ ಇದು ಫೋಬಿಯಾಗಳ ಕಾಲ. ಫೋಬಿಯಾಗಳನ್ನೇ ಪ್ರಧಾನವಾಗಿರಿಸಿಕೊಂಡು ಪ್ಲಸ್ ಎಂಬ ಕನ್ನಡ ಸಿನೆಮಾ ಇತ್ತೀಚೆಗಷ್ಟೇ ಬಂದು ಹೋಯಿತು. ಎರಡು ಮೈನಸ್ ಗುಣವುಳ್ಳ ಫೋಬಿಯಾಗಳು ಸೇರಿದರೆ ಪ್ಲಸ್ ಎಂಬ ಗಣಿತದ ಘನ ಸೂತ್ರದ (- x - = +) ಘನತೆಗೆ ಕುಂದು ತಂದ ಸಿನೆಮಾ ಅದಾದರೆ ಇದೇ ಸೂತ್ರವನ್ನು ಬಳಸಿರುವ ಈ ಸಿನೆಮಾ ಕೂಡ ಹಿಂದೆ ಬೀಳದೆ ತೀವ್ರ ಪೈಪೋಟಿ ನೀಡಿದೆ. ಐಬುಗಳನ್ನು ಮುಂದೆ ಮಾಡಿ, ಗೊಂದಲಮಯ ಘಟನೆಗಳನ್ನು ಸೃಷ್ಟಿಸಿ ಹಾಸ್ಯಮಯ ಸಂಭಾಷಣೆಗಳಿಂದ ನಕ್ಕು ನಗಿಸುವ ಸಿದ್ಧ ಸೂತ್ರದ ಸಿನೆಮಾಗಳು ನಮ್ಮ ಮುಂದೆ ಬಂದು ಹಾದು ಹೋಗಿವೆ. ಇದನ್ನೇ ಮರುಕಳಿಸಲು ನಿರ್ದೇಶಕ ಪ್ರಯತ್ನಿಸಿದ್ದರು ಹಾಸ್ಯತತ್ಪರತೆ ಸಿದ್ಧಿಸದೆ ಹೋಗಿ ವಿಫಲರಾಗಿದ್ದಾರೆ. ನಾಯಕಿಗಿರುವ ಕತ್ತಲೆ ಭಯ, ನಾಯಕನಿಗೆ ರಾತ್ರಿಕುರುಡು ಸೇರಿದರೆ ಪ್ರೇಕ್ಷಕನಿಗೆ ಚಿತ್ರಮಂದಿರದಲ್ಲಿ ನಿದ್ದೆ ಫೋಬಿಯಾ ಬರುವಷ್ಟು ನೀರಸವಾಗಿದೆ ಸಿನೆಮಾ. ಟಿವಿ ವಾಹಿನಿಯಲ್ಲಿಯೇ ಸಹಿಸಿಕೊಳ್ಳಲು ಸಾಧ್ಯವಾಗದ 'ಹೀಗೂ ಉಂಟೆ' ಧ್ವನಿ ಹಿನ್ನಲೆಯಲ್ಲಿ ಕೆಲ ಹೊತ್ತು ನಾಯಕನ ಬಗ್ಗೆ ನಿರೂಪಣೆ ಮಾಡುವುದು ಕಿವಿಗೆ ಕಾಯಿಸಿದ ಹರಳಣ್ಣೆ ಉಯ್ಯುವ ಅನುಭವವಾಗುತ್ತದೆ. ಮಧ್ಯಂತರದಲ್ಲಿನ ಒಂದು ತಿರುವು ಬಿಟ್ಟರೆ ಪ್ರೆಡಿಕ್ಟೇಬಲ್ ಆದ ಕಥೆ ಬೇಸರ ಹುಟ್ಟಿಸಿದರೆ, ವಿಪರೀತ ಮಾತಿನ ಚಪಲಕ್ಕೆ ಬಿದ್ದಿರುವ ಸಂಭಾಷಣೆ ಯಾವುದೇ ಕಚಗುಳಿಯೂ ಇಡದೆ ನಿರಾಸೆ ಮೂಡಿಸುತ್ತದೆ. ಸಡಿಲವಾದ ನಿರೂಪಣೆಗೆ, ನಟರ ಕಾಮಿಡಿ ಟೈಮಿಂಗ್ ಕೂಡ ಕೈಕೊಟ್ಟು ಸಹನೆಯ ಪರೀಕ್ಷೆ ನಡೆಯುತ್ತದೆ. ಕೋರ್ಟಿನ ದೃಶ್ಯಗಳನ್ನು ತಂದಿರುವುದು ೭೦ರ ಕಾಲದ ಸಿನೆಮಾಗಳನ್ನು ನೆನಪಿಸುತ್ತದೆ. ಸಿನೆಮಾಗಳು ಎಷ್ಟೇ ಬದಲಾದರೂ ಕೋರ್ಟುಗಳನ್ನು ಮುಖ್ಯವಾಹಿನಿ ಸಿನೆಮಾಗಳಲ್ಲಿ ಒಳಗೊಳ್ಳುವ ರೀತಿ ಮಾತ್ರ ಇಂದಿಗೂ ಹಾಗೆಯೇ ಇದೆ!

ನಟ ದಿಗಂತ್ ಸಿನೆಮಾದ ಮೊದಮೊದಲಿಗೆ ತಮ್ಮ ಎಂದಿನ ಉಡಾಫೆ ನಟನೆಯೊಂದಿಗೆ ಪ್ರಾರಂಭಿಸಿದರು ನಂತರದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಬೋರು ಹೊಡೆಸುತ್ತಾ ಹೋಗುತ್ತಾರೆ. ನಾಯಕ ನಟಿ ಸಂಗೀತ ಚೌಹಾನ್ ನಟನೆ ಅಷ್ಟಕ್ಕಷ್ಟೇ. ಚಿಕ್ಕಣ್ಣ, ಅಚ್ಯುತ್ ಕುಮಾರ್, ಲಕ್ಷ್ಮಿ, ಸತ್ಯಜಿತ್, ಸುಧಾರಾಣಿ ಕೂಡ ತಾರಾಗಣದಲ್ಲಿದ್ದು ಯಾರದ್ದು ನೆನಪಿಡುವ ನಟನೆಯೇನು ಅಲ್ಲ. ಎಂ ಎಸ್ ಶಿವ ಸಂತೋಶ್ ಅವರ ಸಂಗೀತ ಕೆಲವೊಮ್ಮೆ ಅಬ್ಬರ ಎನ್ನಿಸಿ ಪ್ರೇಕ್ಷಕನನ್ನು ನಿದ್ದೆಯಿಂದ ಬಡಿದೆಬ್ಬಿಸಬಹುದಷ್ಟೇ. ಹಾಸ್ಯ ಪರಿಕಲ್ಪನೆಯಲ್ಲಿ ರೊಮ್ಯಾಂಟಿಕ್ ಸಿನೆಮಾ ಮೂಡಿಸಲು ಹೋಗಿ, ಆಕ್ಷನ್ ಕೂಡ ಅದರಲ್ಲಿ ತುರುಕಿ ಕಲಸೋಗರ ಮಾಡಿ  ಯಾವುದಕ್ಕೂ ಸರಿಯಾಗಿ ನ್ಯಾಯ ನೀಡದೆ ಪ್ರೇಕ್ಷನನ್ನು ಬಸವಳಿಸುತ್ತಾರೆ ನಿರ್ದೇಶಕ ಗೌಸ್ ಪೀರ್.






Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT